ಢಾಕಾ: ಗುರುವಾರ ತಡರಾತ್ರಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಏಳು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 43 ಜನರು ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.
ಅಗ್ನಿ ಅವಘಡದಲ್ಲಿ ಇಲ್ಲಿಯವರೆಗೆ 43 ಮಂದಿ ಮೃತಪಟ್ಟಿರುವುದಾಗಿ ಬಾಂಗ್ಲಾದೇಶದ ಆರೋಗ್ಯ ಸಚಿವ ಸಮಂತಾ ಲಾಲ್ ಸೇನ್ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಇತರ ಆಸ್ಪತ್ರೆಗಳಿಗೆ ಭೇಟಿ ನೀಡಿದ ಬಳಿಕ ಮಾಹಿತಿ ಹಂಚಿಕೊಂಡಿದ್ದಾರೆ.
ಕನಿಷ್ಠ 40 ಮಂದಿ ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೇನ್ ಹೇಳಿದ್ದಾರೆ.
ಢಾಕಾದ ಬೈಲಿ ರಸ್ತೆಯಲ್ಲಿರುವ ಏಳು ಅಂತಸ್ತಿನ ಕಟ್ಟಡದ ಕೆಳಭಾಗದಲ್ಲಿರುವ ಬಿರಿಯಾನಿ ರೆಸ್ಟೋರೆಂಟ್ ನಲ್ಲಿ ಗುರುವಾರ ರಾತ್ರಿ 9:50 ಗಂಟೆಗೆ ಬೆಂಕಿ ಕಾಣಿಸಿಕೊಂಡಿತು ಮತ್ತು ತ್ವರಿತವಾಗಿ ಮೇಲಿನ ಮಹಡಿಗಳಿಗೆ ಹರಡಿತು. ಇದರಿಂದ ಕಟ್ಟಡದಿಂದ ಹೊರಬರಲಾಗದೆ ಹಲವರು ಜೀವ ಕಳೆದುಕೊಳ್ಳಬೇಕಾಯಿತು ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮೊಹಮ್ಮದ್ ಶಿಹಾಬ್ ಹೇಳಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅಲ್ಲದೆ ಈ ವೇಳೆ ಸುಮಾರು 75 ಮಂದಿಯನ್ನು ರಕ್ಷಣೆ ಮಾಡಿರುವುದಾಗಿ ತಿಳಿಸಿದ್ದಾರೆ.



