Sunday, December 7, 2025
Google search engine

HomeUncategorizedಎಂಡಿಎಂಎ ಮಾರಾಟ ಮಾಡಲು ಯತ್ನ: ಐವರು ಆರೋಪಿಗಳಿಗೆ ಶಿಕ್ಷೆ ಪ್ರಕಟ

ಎಂಡಿಎಂಎ ಮಾರಾಟ ಮಾಡಲು ಯತ್ನ: ಐವರು ಆರೋಪಿಗಳಿಗೆ ಶಿಕ್ಷೆ ಪ್ರಕಟ

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸಿದ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯವು 12ರಿಂದ 14 ವರ್ಷಗಳ ಕಠಿಣ ಸಜೆ ವಿಧಿಸಿದೆ.
ಆರೋಪಿಗಳಾದ ಬೆಂಗಳೂರು ವರ್ತೂರಿನ ಗುಂಟೂರ್ ಪಾಳ್ಯದ ಲುವಾಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ, ಉಪ್ಪಳದ ಮೊಹಮ್ಮದ್ ರಮೀಝ್‌ ಅಲಿಯಾಸ್ ಮುಹಮ್ಮದ್ ರಮೀಝ್, ಕಾಸರಗೋಡು ಕುನ್ನಿಲ್‌ನ ಮೊಯ್ದೀನ್ ರಶೀದ್ , ಉಪ್ಪಳದ ಅಬ್ದುಲ್ ರವೂಫ್‌ ಅಲಿಯಾಸ್ ಟಫ್ ರವೂಫ್ ಮತ್ತು ಬೆಂಗಳೂರು ಮಡಿವಾಳದ ಸಬಿತ ಅಲಿಯಾಸ್ ಚಿಂಜು ಅಲಿಯಾಸ್ ಸಮೀರ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಅವರು ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಎನ್‌ಡಿಪಿಎಸ್ ಆ್ಯಕ್ಟ್ 21, 21(ಸಿ) ಪ್ರಕಾರ ಆರೋಪಿ ಲೋವೆಲ್ ಡೇನಿಯಲ್ ಜಸ್ಟಿನ್ ಬೌಲೋ ಅಲಿಯಾಸ್ ಡ್ಯಾನಿಗೆ 12 ವರ್ಷ ಜೈಲು ಸಜೆ ಮತ್ತು 1,25 ,000 ದಂಡ, ಮುಹಮ್ಮದ್ ರಮೀಜ್‌ಗೆ 14 ವರ್ಷ ಮತ್ತು 1,45,000 ದಂಡ , ಮೊಯಿದ್ದೀನ್ ರಶೀದ್‌ಗೆ 12 ವರ್ಷ ಮತ್ತು 1,25,000 ದಂಡ, ಅಬ್ದುಲ್ ರವೂಫ್‌ಗೆ 13 ವರ್ಷ ಮತ್ತು 1,35,000 ದಂಡ, ಸಬಿತಾಗೆ 12 ವರ್ಷ ಮತ್ತು 1, 25,000 ದಂಡ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.
ಈ ಐವರೂ ಮಾದಕ ಪದಾರ್ಥ ಸೇವಿಸಿದ್ದು ಸಾಬೀತಾಗಿದೆ.
ಈ ಸಂಬಂಧ ಎಲ್ಲರಿಗೂ ಹೆಚ್ಚುವರಿಯಾಗಿ 6 ತಿಂಗಳ ಕಠಿಣ ಸಜೆ ಹಾಗೂ ತಲಾ 10 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 1 ತಿಂಗಳ ಕಠಿಣ ಸಜೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
2022 , ಜೂ.6ರಂದು ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ತಮ್ಮ ತಂಡದೊಂದಿಗೆ ದಾಳಿ ನಡೆಸಿ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಐವರನ್ನು ಬಂಧಿಸಿ, ಅವರ ಬಳಿಯಿಂದ 125 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈ ಸಂಬಂಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಇನ್ಸ್‌ಪೆಕ್ಟರ್ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಈ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ, ತೀರ್ಪು ನೀಡಿದರು.

RELATED ARTICLES
- Advertisment -
Google search engine

Most Popular