ಮಂಗಳೂರು (ದಕ್ಷಿಣ ಕನ್ನಡ) : ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳ ಬಗ್ಗೆ ವಿಪಕ್ಷವಾದ ಬಿಜೆಪಿ ವಿರೋಧಿಸಿತ್ತು.ಅಲ್ಲದೇ ದುಡ್ಡೇ ಸಿಗದು ಎಂದು ಅಪಪ್ರಚಾರ ಮಾಡಿತ್ತು. ಆದರೆ ಐದು ಗ್ಯಾರಂಟಿಗಳೂ ಇದೀಗ ಯಶಸ್ವಿಯಾಗಿ ಜಾರಿಯಾಗಿವೆ. ಇದೀಗ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ನಡೆಸುವ ಜಾತಿ ಗಣತಿಯನ್ನೂ ವಿರೋಧಿಸುತ್ತಿರಾ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ. ಅವರು ಇಂದು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದರು.
ಕೇಂದ್ರ ಸರಕಾರವು ಅವೈಜ್ಞಾನಿಕವಾಗಿ ಜಿಎಸ್ ಟಿ ಜಾರಿಗೊಳಿಸಿ ಇದೀಗ ಕಡಿಮೆ ಮಾಡಿ ಸಂಭ್ರಮ ಪಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು, ಸಮಾಜದ ಎಲ್ಲಾ ವರ್ಗದ ಜನರಿಗೆ ನ್ಯಾಯಯುತವಾಗಿ ಸರಕಾರದಿಂದ ಸಿಗಬೇಕಾದ ಸೌಲಭ್ಯದ ಹಂಚಿಕೆಗಾಗಿ ನಡೆಯುತ್ತಿರುವ ಸಮೀಕ್ಷೆಗೆ ಎಲ್ಲರ ಸಹಕಾರ ಅಗತ್ಯವಿದೆ. ದ.ಕ. ಮತ್ತು ಉಡುಪಿಯಲ್ಲಿ ತಾಂತ್ರಿಕ ಕಾರಣದಿಂದ ಸಮೀಕ್ಷೆ ವಿಳಂಬವಾಗಿದೆ. ರಾಜ್ಯದಲ್ಲಿ ನಿನ್ನೆಯವರೆಗೆ ಬೆಂಗಳೂರು ಹೊರತುಪಡಿಸಿ ಒಟ್ಟು ಶೇ.71.5ರಷ್ಟು ಸಮೀಕ್ಷೆ ನಡೆದಿದೆ. ದ.ಕ. ಜಿಲ್ಲೆಯ ಸುಳ್ಯದಲ್ಲಿ ಶೇ.100ರಷ್ಟು ಸಮೀಕ್ಷೆ ಆಗಿದೆ. ಬೆಳ್ತಂಗಡಿಯಲ್ಲೂ ಶೇ.76ರಷ್ಟು ಸಮೀಕ್ಷೆ ಆಗಿದೆ. ಮುಂದೆ ಆಯೋಗದ ತೀರ್ಮಾನದಂತೆ ಸಮೀಕ್ಷೆ ಕಾರ್ಯ ಮುಂದುವರಿಸುವ ನಿರ್ಧಾರವಾಗಲಿದೆ ಎಂದವರು ಹೇಳಿದರು.
ಅಕ್ಟೋಬರ್ 8ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಆವರೆಗೆ ಎಷ್ಟು ಪ್ರಮಾಣದ ಸಮೀಕ್ಷೆ ಆಗಿದೆ ಎಂಬ ನೆಲೆಯಲ್ಲಿ ಆಯೋಗದ ನಿರ್ದೇಶನದ ಮೇರೆಗೆ, ಮುಂದೆ ಸಮೀಕ್ಷೆಗೆ ಶಿಕ್ಷಕರನ್ನು ಮಕ್ಕಳ ಪಾಠ- ಚಟುವಟಿಕೆಗಳಿಗೆ ತೊಂದರೆ ಆಗದಂತೆ ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬ ಬಗ್ಗೆ ಇಲಾಖೆ ನಿರ್ಧರಿಸಲಿದೆ. ಶೇ.95ರಷ್ಟು ಶಿಕ್ಷಕರು ರಾಜ್ಯದಲ್ಲಿ ಸಮೀಕ್ಷೆಯಲ್ಲಿ ಮುಂಚೂಣಿಯಲ್ಲಿದ್ದು ಸಹಕರಿಸಿದ್ದಾರೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಖಂಡರಾದ ಪದ್ಮರಾಜ್, ಶುಭೋದಯ ಆಳ್ವ, ಪದ್ಮನಾಭ ಕೋಟ್ಯಾನ್, ಟಿ.ಕೆ.ಸುಧೀರ್, ನೀರಜ್ ಪಾಲ್ ಮತ್ತಿತರರು ಉಪಸ್ಥಿತರಿದ್ದರು