ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತಿ ಮೆರವಣಿಗೆಯಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಬಳ್ಳಾಪುರ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹನುಮಂತಪುರದ ರಾಜೇಶ್, ಚಂದನ್, ರಾಮಗಾನಪರ್ತಿಯ ಶ್ರೀನಿವಾಸ್, ಶಾಂತಿನಗರದ ಮುನೇಗೌಡ ಹಾಗೂ ಅಂದಾರ್ಲಹಳ್ಳಿಯ ನವೀನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯವು ಬಂಧಿತ ಐವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಶನಿವಾರ ನಡೆದ ಕೆಂಪೇಗೌಡ ಜಯಂತಿ ಮೆರವಣಿಗೆಯಲ್ಲಿ ಶಾಸಕ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿ, ಈ ವೇಳೆ ಶಾಸಕನತ್ತ ಚಪ್ಪಲಿ ಎಸೆಯಲಾಗಿತ್ತು.



