ಚನ್ನಪಟ್ಟಣ: ತಾಲೂಕಿನ ಬೇವೂರು ಗ್ರಾಮದ ಶಕ್ತಿ ದೇವತೆ ಶ್ರೀ ಆದಿ ಉಡಸಲಮ್ಮ ದೇವಿಯ ನೂತನ ದೇವಸ್ಥಾನದ ನಿರ್ಮಾಣಕ್ಕೆ ಚಾಲನೆ ನೀಡುವ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಪರದಲ್ಲಿ ೨೦ ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕಾರ ಮಾಡುವ ಮೂಲಕ ಪರವನ್ನು ಯಶಸ್ವಿಗೊಳಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್‌ಅವರು ದೇವಸ್ಥಾನದ ನಿರ್ಮಾಣದ ಕಾಮಗಾರಿಗೆ ೨೫ ಲಕ್ಷ ರೂ. ಎಂಎಲ್‌ಸಿ ಅನುದಾನದಲ್ಲಿ ಹಾಗೂ ವಯಕ್ತಿಕವಾಗಿ ೫ ಲಕ್ಷ ರೂ. ಸಹಾಯ ನೀಡುವುದಾಗಿ ಸಭೆಯಲ್ಲಿ ಘೋಷಣೆ ಮಾಡಿದರು.
೫೦೦ ವರ್ಷಗಳ ಇತಿಹಾಸ ಇರುವ ಶ್ರೀ ಆದಿಉಡಸಲಮ್ಮ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಕಾಂಗಾರಿಗೆ ಚಾಲನೆ ನೀಡಲು ಆಯೋಜಿಸಿದ್ದ ಪರಕ್ಕೆ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ವೇಳೆ ಭಕ್ತರು ಸಾಗರದಂತೆ ಹರಿದು ಬಂದು ಪ್ರಸಾದ ಸ್ವೀಕಾರ ಮಾಡಿ ದೇವರ ಕೃಪೆಗೆ ಪಾತ್ರರಾಗುವ ಜೊತೆಗೆ ದೇವಸ್ಥಾನದ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದರು.
ಪರದಲ್ಲಿ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಿದ್ದರು. ಅಲ್ಲದೆ ಈ ಮಾರ್ಗದ ವಾಹನ ಸಂಚಾರವನ್ನು ಬದಲಾವಣೆ ಮಾಡಿ ಗುಡ್ಡೆತಿಮ್ಮಸಂದ್ರ ಮೂಲಕ ಬೈರಾಪಟ್ಟಣ ಕೆಸ್ತೂರು ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಪರದಲ್ಲಿ ಗ್ರಾಮದ ಯುವಕರು ಸ್ವಯಂ ಸೇವಕರಾಗಿ ಸೇವೆ ಮಾಡಿ ಭಕ್ತರಿಗೆ ಪ್ರಸಾದ ವಿತರಣೆ ಮಾಡುವಲ್ಲಿ ಶ್ರಮಿಸಿದರು.
