ವರದಿ :ಸ್ಟೀಫನ್ ಜೇಮ್ಸ್.
ಖಾನಾಪುರ: ತಾಲ್ಲೂಕಿನ ಸುಳ್ಳೆಗಾಳಿ ಬಳಿ ಭಾನುವಾರ ವಿದ್ಯುತ್ ತಗುಲಿ ಎರಡು ಕಾಡಾನೆ ಮೃತಪಟ್ಟ ಪ್ರಕರಣದ ತನಿಖೆ ಚುರುಗೊಳಿಸಲಾಗಿದೆ. ಸೋಮವಾರ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನೊಬ್ಬರಿಗಾಗಿ ಹುಡುಕಾಟ ನಡೆದಿದೆ.  ಆರೋಪಿಗಳ ವಿರುದ್ಧ ನಾಗರಗಾಳಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೃಷಿ ಜಮೀನಿನಲ್ಲಿ ವಿದ್ಯುತ್ ತಂತಿಗಳು ಹರಿದುಬಿದ್ದ ಹಿನ್ನೆಲೆಯಲ್ಲಿ ಹೆಸ್ಕಾಂ ಇಲಾಖೆಗೆ ನೋಟೀಸ್ ಜಾರಿ ಮಾಡಲಾಗಿದೆ.
‘ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆಯ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ, ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಲ್ಲ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸೌರತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಎರಡು ಕಾಡಾನೆಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ.  
ತಂತಿ ಬೇಲಿಗೆ ಹೆಸ್ಕಾಂ ಕರೆಂಟ್
ಸುಳ್ಳೆಗಾಳಿಯ ಗಣಪತಿ ಸಾತೇರಿ ಗುರವ ಅವರ ಹೊಲಕ್ಕೆ ಐಬಾಕ್ಸ್ ಸೌರತಂತಿ ಬೇಲಿ ಅಳವಡಿಸಲಾಗಿದೆ. ಕಳೆದ ಹಲವು ದಿನಗಳಿಂದ ಸುಳ್ಳೆಗಾಳಿ ಭಾಗದಲ್ಲಿ ಸೂರ್ಯನ ಶಾಖದ ಪ್ರಖರತೆ ಇಲ್ಲದ್ದರಿಂದ ಸೋಲಾರ್ ತಂತಿಗಳಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಸರಬರಾಜು ಆಗುತ್ತಿರಲಿಲ್ಲ. ಈ ಕಾರಣಕ್ಕೆ ಅವರು ಹೊಲದಲ್ಲಿದ್ದ ಹೆಸ್ಕಾಂನ ವಿದ್ಯುತ್ ಸಂಪರ್ಕವನ್ನು ವೈರ್‌ಗಳ ಮೂಲಕ ತಂದು ಸೋಲಾರ್ ತಂತಿಬೇಲಿಗೆ ನೀಡಿದ್ದರು. ಈ ತಂತಿಬೇಲಿ ಸಂಪರ್ಕಿಸಿದ್ದ ಆನೆಗಳು ಮೃತಪಟ್ಟಿವೆ ಎಂಬ ಪ್ರಾಥಮಿಕ ಅಂಶವನ್ನು ಹೆಸ್ಕಾಂ ಮತ್ತು ಅರಣ್ಯಾಧಿಕಾರಿಗಳ ಜಂಟಿ ತನಿಖಾ ತಂಡ ಬಯಲಿಗೆ ಎಳೆದಿದೆ.
ಅಧಿಕಾರಿಗಳ ತಂಡದಿಂದ ಅಂತ್ಯಕ್ರಿಯೆ
ಕಾಡಾನೆಗಳ ಮೃತದೇಹಗಳ ಅಂತ್ಯಕ್ರಿಯೆ ಅರಣ್ಯ ಇಲಾಖೆಯ ಕಾನೂನಿನಂತೆ ಸೋಮವಾರ ನಾಗರಗಾಳಿ ಅರಣ್ಯದಲ್ಲಿ ಪಶುವೈದ್ಯರಾದ ಡಾ.ಅಯಾಜ್ ಡಾ.ನಾಗರಾಜ ಹುಯಿಲಗೋಳ ಮತ್ತು ಡಾ.ಮಧುಸೂದನ್ ಅವರ ತಂಡ ಎರಡೂ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಿತು. ನಂತರ ಸಿಸಿಎಫ್ ಮಂಜುನಾಥ ಚವಾಣ ಡಿಸಿಎಫ್ ಎನ್.ಇ. ಕ್ರಾಂತಿ ಎಸಿಎಫ್‌ಗಳಾದ ಶಿವಾನಂದ ಮಗದುಮ್ ನಾಗರಾಜ ಬಾಳೆಹೊಸೂರ ಸುನೀತಾ ನಿಂಬರಗಿ ಸೇರಿದಂತೆ ವನ್ಯಜೀವಿ ಪರಿಪಾಲಕರು ಕಾಳಿ ಹುಲಿ ಅಭಯಾರಣ್ಯದ ವನ್ಯಜೀವಿ ತಜ್ಞರು ಪರಿಸರವಾದಿಗಳು ಪಿಡಿಒ ಸದಸ್ಯರು ಅರಣ್ಯ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಕಳೆಬರ ಹೂಳಲಾಯಿತು.




                                    