Tuesday, March 24, 2026
Google search engine

Homeಸ್ಥಳೀಯಏಪ್ರಿಲ್ 1ರಿಂದ ಅರಣ್ಯ ಹಂಗಾಮಿ ನೌಕರರ ಮುಷ್ಕರ : ನೇರ ವೇತನಕ್ಕೆ ಒತ್ತಾಯ

ಏಪ್ರಿಲ್ 1ರಿಂದ ಅರಣ್ಯ ಹಂಗಾಮಿ ನೌಕರರ ಮುಷ್ಕರ : ನೇರ ವೇತನಕ್ಕೆ ಒತ್ತಾಯ

ಬೆಂಗಳೂರು : ಹೊರಗುತ್ತಿಗೆ ರದ್ದುಪಡಿಸಿ ಅರಣ್ಯ ಇಲಾಖೆಯಿಂದಲೇ ವೇತನ ಪಾವತಿಸುವುದೂ ಸೇರಿದಂತೆ ತಮ್ಮ ಹಲವು ಬೇಡಿಕೆ ಮುಂದಿಟ್ಟು ಏಪ್ರಿಲ್ 1ರಿಂದ ವನ್ಯಜೀವಿ ವಿಭಾಗದ ಹಂಗಾಮಿ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದ ಉಪಾಧ್ಯಕ್ಷ ಎಸ್.ಎಸ್. ಹರೀಶ್ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಸುಮಾರು 6,000 ತಾತ್ಕಾಲಿಕ ಸಿಬ್ಬಂದಿ ಇದ್ದಾರೆ. ಇವರಲ್ಲಿ 4,000ಕ್ಕೂ ಹೆಚ್ಚು ಮಂದಿ ಮುಷ್ಕರದಲ್ಲಿ ಭಾಗವಹಿಸಲು ಸಮ್ಮತಿಸಿದ್ದಾರೆ. ವಾಚರ್‌ಗಳು, ಗಾರ್ಡ್‌ಗಳು, ಡ್ರೈವರ್‌ಗಳು ಸೇರಿದಂತೆ ಅರಣ್ಯ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದ್ದಾರೆ.

ಇದೇ ವೇಳೆ ಸಿಬ್ಬಂದಿ ಮಂಗಳವಾರ ನಡೆಯಬೇಕಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲೂ ಭಾಗವಹಿಸಲು ನಿರಾಕರಿಸಿದ್ದು, ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ನೇರವಾಗಿ ಸಭೆ ನಡೆಸಬೇಕು. ಕೇವಲ ಆನ್‌ಲೈನ್ ಚರ್ಚೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಮುಷ್ಕರದಿಂದ ಅರಣ್ಯ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆ ಮತ್ತು ದಿನನಿತ್ಯದ ಕಾರ್ಯಗಳಿಗೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ವಿಶೇಷವಾಗಿ ಬೇಸಿಗೆ ವೇಳೆ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಬೆಂಕಿ ತಡೆ ಹಾಗೂ ನಿಯಂತ್ರಣ ಕಾರ್ಯಗಳಿಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಜೊತೆಗೆ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗುವ ಭೀತಿ ಇದೆ.

ಸಿಬ್ಬಂದಿಯ ಪ್ರಮುಖ ಬೇಡಿಕೆಗಳಲ್ಲಿ, ವೇತನವನ್ನು ಮಧ್ಯವರ್ತಿಗಳ ಮೂಲಕ ನೀಡುವುದನ್ನು ನಿಲ್ಲಿಸಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂಬುದು ಪ್ರಮುಖವಾಗಿದೆ. ಮಧ್ಯವರ್ತಿಗಳ ಮೂಲಕ ವೇತನ ನೀಡುವ ವ್ಯವಸ್ಥೆಯಿಂದ ಒಂದು ತಿಂಗಳವರೆಗೂ ವಿಳಂಬವಾಗುತ್ತಿರುವುದಾಗಿ ಅವರು ಆರೋಪಿಸಿದ್ದಾರೆ.

ಇದಲ್ಲದೆ, ಅರಣ್ಯ ಇಲಾಖೆಯಲ್ಲಿ 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ತಾತ್ಕಾಲಿಕ ಸಿಬ್ಬಂದಿಗೆ ಶಾಶ್ವತ ನೌಕರರ ಸಮಾನ ಸೌಲಭ್ಯಗಳು ಮತ್ತು ಪರಿಹಾರ ಹಣ ನೀಡಬೇಕೆಂದೂ ಬೇಡಿಕೆ ಇಟ್ಟಿದ್ದಾರೆ. 2017ರವರೆಗೆ ನೇರವಾಗಿ ವೇತನ ಜಮಾ ಮಾಡಲಾಗುತ್ತಿತ್ತು. ಆದರೆ, ಬಳಿಕ ಈ ವ್ಯವಸ್ಥೆ ಬದಲಾಗಿದ್ದು, ಇದನ್ನು ಮತ್ತೆ ಜಾರಿಗೆ ತರಬೇಕೆಂದು ಸಿಬ್ಬಂದಿ ಆಗ್ರಹಿಸಿದ್ದಾರೆ.

ಹಿಂದೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಆಗಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಕಾರ್ಯದರ್ಶಿ ಮತ್ತು ಕೊಡಗು ಶಾಸಕ ಎ.ಎಸ್. ಪೊನ್ನಣ್ಣ ಅವರು ನಮ್ಮನ್ನು ಭೇಟಿ ಮಾಡಿ ನೇರ ವೇತನ ಪಾವತಿಯ ಭರವಸೆ ನೀಡಿದ್ದರು. ಆದರೂ ಅದು ಇನ್ನೂ ಜಾರಿಗೆ ಬಂದಿಲ್ಲ ಎಂದು ಸಂಘದ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಂ.ಎಂ. ಹಿಲ್ಸ್‌ನಲ್ಲಿ ನಡೆದ ಹುಲಿ ವಿಷ ಪ್ರಕರಣದ ಸಂದರ್ಭದಲ್ಲಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ ನಮಗೆ ಸಕಾಲಿಕ ವೇತನ ಮತ್ತು ಸಿಬ್ಬಂದಿಗೆ ಸಮಾನವಾದ ಇತರ ಸೌಲಭ್ಯಗಳನ್ನು ಭರವಸೆ ನೀಡಿದ್ದರು, ಆದರೆ, ನೀಡಲಿಲ್ಲ. 15 ದಿನಗಳ ಹಿಂದೆ ಇಲಾಖೆಯ ಪ್ರಧಾನ ಕಚೇರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, “ಎಲ್ಲಾ ಇಲಾಖೆಗಳಲ್ಲೂ ತಾತ್ಕಾಲಿಕ ಸಿಬ್ಬಂದಿಗೆ ಸಂಸ್ಥೆಗಳ ಮೂಲಕವೇ ವೇತನ ನೀಡಲಾಗುತ್ತಿದೆ. ಅಂತಿಮ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷ ಸಮಸ್ಯೆ ಕುರಿತು ಚರ್ಚಿಸಲು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಕೋಟ ಶ್ರೀನಿವಾಸ ಪೂಜಾರಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ. ಸಿ.ಎನ್. ಮಂಜುನಾಥ್ ಮತ್ತು ಮಲ್ಲೇಶ್ ಬಾಬು ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.

ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಸಭೆ ಮಹತ್ವ ಪಡೆದುಕೊಂಡಿದೆ.

RELATED ARTICLES
- Advertisment -
Google search engine

Most Popular