ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ದಿಗ್ಗಜರಲ್ಲಿ ಒಬ್ಬರಾಗಿದ್ದ ದ್ವಾರಕೀಶ್ ಅವರ ನಿಧನಕ್ಕೆ ಮಾಜಿ ಸಚಿವ ಕೆ ಗೋಪಾಲಯ್ಯ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ದ್ವಾರಕೀಶ್ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭಾವಂತ ಕಲಾವಿದ, ಅವರು ನಟರಾಗಿ ಚಿತ್ರರಂಗಕ್ಕೆ ಅಡಿ ಇಟ್ಟು ,ನಂತರ ನಿರ್ಮಾಪಕರಾಗಿ, ನಿರ್ದೇಶಕರಾಗಿ, ತಂತ್ರಜ್ಞರಾಗಿ ಬೆಳೆದ ಎತ್ತರ ಎಂತಹವರನ್ನು ಬೆರಗುಗೊಳಿಸುತ್ತದೆ. ಡಾ. ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರ ಜೊತೆಯಾಗಿ ಅವರು ಅನೇಕ ದಶಕಗಳ ಕಾಲ ಕನ್ನಡ ಚಿತ್ರ ರಸಿಕರನ್ನು ರಂಜಿಸಿ ಮನೆ ಮಾತಾದರು. ನಂತರ ಸ್ವತಃ ನಾಯಕರಾಗಿ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದರು, ಮೇಯರ್ ಮುತ್ತಣ್ಣ ಚಿತ್ರದ ಮೂಲಕ ನಿರ್ಮಾಪಕರು ಆದರು, ಕನ್ನಡ ಚಿತ್ರಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸಿ ಶ್ರೀಮಂತಿಕೆಯ ಮೆರುಗು ನೀಡಿದರು.
ಶೃತಿ, ಆಪ್ತಮಿತ್ರ, ಚೌಕ ದಂತಹ ಚಿತ್ರಗಳ ಮೂಲಕ ಹೊಸ ದಾಖಲೆಗಳನ್ನೇ ಬರೆದರು.
ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕಾಣಿಕೆ ಅಮೋಘವಾದದ್ದು. ಕನ್ನಡ ಚಿತ್ರರಂಗಕ್ಕೆ ಹೊಸದೊಂದು ಆಯಾಮ ನೀಡಿದ ದ್ವಾರಕೀಶ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಅನರ್ಘ್ಯ ರತ್ನ ವೊಂದನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ಈ ಆಘಾತವನ್ನು ಭರಿಸುವ ಶಕ್ತಿ ಭಗವಂತನು ನೀಡಲಿ, ಅವರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಸಚಿವ ಕೆ ಗೋಪಾಲಯ್ಯ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.