ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ವಾಲ್ಮೀಕಿ ನಿಗಮದಲ್ಲಿನ ಹಗರಣದ ಬಗ್ಗೆ ಉಲ್ಲೇಖಿಸಿ ಬೇಸರ ಹೊರಹಾಕಿದ್ದಾರೆ. ಇನ್ನು, ಇದೇ ವೇಳೆ ಮಾಜಿ ಸಚಿವ ನಾಗೇಂದ್ರ ಹೆಸರನ್ನ ಹೇಳದೇ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಬೆಂಗಳೂರಲ್ಲಿ ನಡೆದ ವಾಲ್ಮೀಕಿ ಮುಖಂಡರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಸಚಿವರಾಗಿದ್ದು ಸಮಾಜಕ್ಕೆ ಉಪಯೋಗವಿಲ್ಲ, ಸಂಖ್ಯೆಗೆ ಸಮಾಜದವರು ಸಚಿವರಾದರೆ ಸಾಲುವುದಿಲ್ಲ, ಸಮಾಜಕ್ಕೆ ಉಪಯೋಗ ಆಗುವ ಸಚಿವರು ಬೇಕು ಎಂದು ವಾಲ್ಮೀಕಿ ನಿಗಮದ 187 ಕೋಟಿ ಹಗರಣ ಪ್ರಸ್ತಾಪಿಸಿ ಮಾಜಿ ಸಚಿವ ನಾಗೇಂದ್ರ ಅವರ ಹೆಸರನ್ನ ಉಲ್ಲೇಖಿಸದೇ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಇದೇ ವೇಳೆ ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ವಿಚಾರ ಮಾತನಾಡಿದ ಅವರು, ಎಷ್ಟು ಜನ ವಾಲ್ಮೀಕಿ ಶಾಸಕರಿದ್ದಾರೆ, ಈ ಸಮಸ್ಯೆಗಳ ಬಗ್ಗೆ ಮೊದಲು ಬಾಯ್ಬಿಡಿ, ಸಿಎಂ, ಡಿಸಿಎಂ ಇದನ್ನ ಗಮನದಲ್ಲಿಟ್ಟುಕೊಳ್ಳಬೇಕು, ನಮ್ಮವರೇ ಮಿನಿಸ್ಟರ್ ಇದ್ದರು, ನಿಗಮನ 82 ಕೋಟಿ ಹಣ ಏನಾಯ್ತು, ಬದ್ಧತೆ ಇರುವವರನ್ನ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಿ ಎಂದು ಹೇಳಿದರು.
ಸಚಿವ ಸ್ಥಾನಕ್ಕೆ ಬೇಡಿಕೆ ಇಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪ ಅವರು, ನನ್ನ ಅವಶ್ಯಕತೆ ಪಕ್ಷಕ್ಕೆ ಬೇಕಾದಾಗ ಕೇಳುತ್ತೇನೆ, ಬಳಸಿಕೊಳ್ಳುವುದು ಪಕ್ಷಕ್ಕೆ ಬಿಟ್ಟಿದ್ದು, ಇಲ್ಲಿವರೆಗೆ ನನಗೆ ಸಿಕ್ಕಿದ್ದು ಮೆರಿಟ್ ಮೇಲೆ, ಹಾಗಾಗಿ ಪಕ್ಷವೇ ತೀರ್ಮಾನ ಮಾಡಬೇಕು ಎಂದು ಉತ್ತರಿಸಿದ್ದಾರೆ.



