ಮಂಗಳೂರು( ದಕ್ಷಿಣ ಕನ್ನಡ):ಪಕ್ಕಲಡ್ಕ ಯುವಕ ಮಂಡಲವು ಸ್ಥಳೀಯ ಜನರ ನೋವು ನಲಿವುಗಳಿಗೆ ಸದಾ ಸ್ಪಂದಿಸುತ್ತಾ ನಿರಂತರ ಜನಪರ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಈ ಭಾಗದ ಅಭಿವೃದ್ಧಿಯಲ್ಲಿ ಪಕ್ಕಲಡ್ಕ ಯುವಕ ಮಂಡಲದ ಕೊಡುಗೆ ಅಪಾರ ಎಂದು ಸಾಮರಸ್ಯ ಬಳಗ ಮಂಗಳೂರು ಇದರ ಸಂಚಾಲಕರಾದ ಮಂಜುಳಾ ನಾಯಕ್ ಇಂದು ಪಕ್ಕಲಡ್ಕ ಯುವಕ ಮಂಡಲ, ಸಾಮರಸ್ಯ ಬಳಗ ಮಂಗಳೂರು ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬಜಾಲ್ ನ ಭಗತ್ ಸಿಂಗ್ ಭವನದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 70 ವರುಷದ ಹಿಂದೆ ಪ್ರಾರಂಭಗೊಂಡ ಈ ಸಂಸ್ಥೆಯು ರಾತ್ರಿ ಶಾಲೆಯ ಮೂಲಕ ಅಕ್ಷರಭ್ಯಾಸವನ್ನು ಕಲಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಊರಿನ ವಿದ್ಯಾರ್ಥಿಗಳ ಏಳಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಅದೇ ರೀತಿ ಸ್ಥಳೀಯರಿಗೆ ಕಾಡುವ ರೋಗ ರುಜಿನಗಳಿಗೆ ತುರ್ತು ಸ್ಪಂಧಿಸಲು ಉಚಿತ ಆಂಬ್ಯುಲೆನ್ಸ್ ಕೊಡುಗೆ ನೀಡಿ ಆರೋಗ್ಯ ಕಾಳಜಿಗೆ ಮಹತ್ತರವಾದ ನೆರವಿನ ಹಸ್ತ ಚಾಚುವ ಮೂಲಕ ಮಾದರಿ ಯುವಕ ಮಂಡಲ ಎನಿಸಿಕೊಂಡಿದೆ. ಆದರೆ ಸರಕಾರಗಳು ಇಂತಹ ಮಾದರಿ ಯುವಕ ಮಂಡಲಗಳನ್ನು ಗುರುತಿಸಿ ಪ್ರೋತ್ಸಾಹಿಸದೆ ಇರುವುದು ಬಹಳ ದುರಂತ ಮತ್ತು ಖೇದಕರ. ಊರಿನ ನಾಗರಿಕರು ಈ ಯುವಕ ಮಂಡಲ ನಡೆಸುವ ಜನಪರ ಕಾರ್ಯಕ್ರಮಗಳನ್ನು ಸದಾ ಪ್ರೋತ್ಸಾಹಿಸಿ ಇದರ ಬೆಳವಣೆಗೆಗೆ ಮತ್ತು ಉಳಿವಿಗಾಗಿ ಶ್ರಮಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು. ವೇದಿಕೆಯಲ್ಲಿ ಕಣ್ಣಿನ ವೈದ್ಯರಾದ ಡಾ ಅಕ್ಷತಾ, ಪಕ್ಕಲಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಬಿ ನಾಗೇಶ್ ಶೆಟ್ಟಿ, ಪಕ್ಕಲಡ್ಕ ಯುವಕ ಮಂಡಲದ ಮಾಜಿ ಕಾರ್ಯದರ್ಶಿ ಜಗದೀಶ್ ಬಜಾಲ್, ಡಿವೈಎಫ್ಐ ಬಜಾಲ್ ಘಟಕದ ಅಧ್ಯಕ್ಷರಾದ ಜಗದೀಶ್ ಕುಲಾಲ್ ಉಪಸ್ಥಿತರಿದ್ದರು. ಪಕ್ಕಲಡ್ಕ ಯುವಕ ಮಂಡಲ ಅಧ್ಯಕ್ಷರಾದ ದೀಪಕ್ ಬಜಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಪ್ರೀತೇಶ್ ತಲವಾರು, ಜೊತೆ ಕಾರ್ಯದರ್ಶಿ ಧೀರಾಜ್ ಬಜಾಲ್ ವಂದಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಪಕ್ಕಲಡ್ಕ ಯುವಕ ಮಂಡಲದ ಪದಾಧಿಕಾರಿಗಳಾದ ದೀಕ್ಷಿತ್ ಭಂಡಾರಿ, ನಾಗರಾಜ್ ಬಜಾಲ್, ಪ್ರಕಾಶ್ ಶೆಟ್ಟಿ, ಆನಂದ ಎನೆಲ್ಮಾರ್, ಅಶೋಕ ಎನೆಲ್ಮಾರ್, ಅಖಿಲೇಶ್, ಲೋಕೇಶ್ ಎಂ, ಕಮಲಾಕ್ಷ ಶೆಟ್ಟಿ, ಹರಿಹರನ್, ವರಪ್ರಸಾದ್, ಪ್ರದೀಪ್ ಶೆಟ್ಟಿ, ಅಶೋಕ್ ಸಾಲ್ಯಾನ್ ಮುಂತಾದವರು ವಹಿಸಿದ್ದರು.
500 ಕ್ಕೂ ಮಿಕ್ಕಿ ಸ್ಥಳೀಯರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. 50 ಕ್ಕೂ ಮಿಕ್ಕಿ ಪಕ್ಕಲಡ್ಕ ಯುವಕ ಮಂಡಲದ ಕಾರ್ಯಕರ್ತರು ಸ್ವಯಂ ಪ್ರೇರಿತ ನೇತ್ರದಾನ ಮಾಡಿದರು.
