ಮೈಸೂರು : 1983.85 ಸಾಲಿನಲ್ಲಿ ಮೈಸೂರಿನ ಸರಸ್ವತಿಪುರಂ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್(ಸಾಹುಕಾರ್ ಚೆನ್ನಯ್ಯ ಸಂಸ್ಥೆ)ಯಲ್ಲಿ ಟಿಸಿಎಚ್ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳು 40 ವರ್ಷಗಳ ನಂತರ ಪ್ರಪ್ರಥಮ ಬಾರಿಗೆ ವಿವಿಧ ಜಿಲ್ಲೆಗಳ ಸ್ನೇಹಿತರುಗಳ ಅಪರೂಪದ ಸಮಾಗಮ ಹಾಗೂ ಬೋಧಿಸಿದ ಗುರುಗಳಿಗೆ ಹಾಗೂ ಸಂಸ್ಥೆಯ ಬೋಧಕೇತರ ಗುರುಗಳಿಗೆ ಹೃದಯಪೂರ್ವಕ ಸನ್ಮಾನ ಪರಸ್ಪರ ಗೌರವ ಹಾಗೂ ಸ್ನೇಹ ಪೂರ್ವಕ ಸಮ್ಮಿಲನ ಕಾರ್ಯಕ್ರಮ ಮಾರ್ಚ್ 29ರ ಭಾನುವಾರ ಬೆಳಗ್ಗೆ 10 ಗಂಟೆಗೆ ಜೆಪಿ ನಗರದ ಜೋಡಿ ರಸ್ತೆಯಲ್ಲಿ ಶನೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ಗೋವಿಂದ ಕೃಷ್ಣ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಲಿದೆ.
ವಿದ್ಯಾರ್ಥಿ ಜೀವನ ಶ್ರೇಷ್ಠ ಜೀವನ. ವಿದ್ಯಾರ್ಥಿ ಜೀವನದಲ್ಲಿ ಕಲ್ಮಶವಿಲ್ಲದ ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ, ಸ್ಪೂರ್ತಿ ,ಚೈತನ್ಯ, ಸಹಕಾರ ಬಾಂಧವ್ಯ, ಕರುಣೆ, ಸಹೋದರ ಭಾವನೆ ,ಜಾತಿ ,ಮತ, ಪಂಥ ಭೇದಗಳಿಲ್ಲದ ಅತ್ಯಂತ ಶ್ರೇಷ್ಠವಾದ ಕ್ಷಣಗಳ ಜೀವನ ವಿದ್ಯಾರ್ಥಿ ಜೀವನವಾಗಿದೆ .ವಿದ್ಯಾರ್ಥಿ ಜೀವನವನ್ನು ಹೃದಯ ಸ್ಪರ್ಶಿ ಕಾಲವೆಂದು ಸುವರ್ಣ ಯುಗವೆಂದು ಹಿರಿಯರು ಕರೆಯುತ್ತಾರೆ. ಅದೇ ಕಾರಣಕ್ಕಾಗಿ 40 ವರ್ಷಗಳ ನಂತರ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ,ಮಡಿಕೇರಿ ವಿವಿಧ ಜಿಲ್ಲೆಗಳಿಂದ ಮೈಸೂರಿಗೆ ಆಗಮಿಸಿ ಅಂದು ಶೈಕ್ಷಣಿಕ ಚಟುವಟಿಕೆಗಳ ಪವಿತ್ರ ಕೇಂದ್ರವಾಗಿದ್ದ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಚೆನ್ನಯ್ಯ ಇನ್ಸ್ಟಿಟ್ಯೂಟ್ ಸಂಸ್ಥೆಗೆ ಸೇರಿ ಟಿಸಿಎಚ್ ತರಬೇತಿ ಪಡೆದು ಇಂದು ಹಲವಾರು ಜಿಲ್ಲೆಗಳಲ್ಲಿ ಶಿಕ್ಷಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ ಸಮಾಜಮುಖಿಯಾಗಿ ಬೆಳೆದು 40 ವರ್ಷಗಳ ನಂತರ 80ಕ್ಕೂ ಹೆಚ್ಚು ವಯೋಮಾನದ ಬೋಧಿಸಿದ ಹಿರಿಯ ಎಲ್ಲಾ ಶಿಕ್ಷಕರನ್ನು ಗುರುತಿಸಿ ಅವರಿರುವ ಸ್ಥಳಗಳನ್ನು ಕಂಡುಹಿಡಿದು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡು ವಿದ್ಯಾರ್ಥಿಯ ಪ್ರೀತಿಯ ಗೌರವವನ್ನು ಸಲ್ಲಿಸುವ ಅಭೂತಪೂರ್ವ ಕಾರ್ಯ ನಡೆಯಲಿದೆ .
ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅಂದಿನ ಪ್ರಾಂಶುಪಾಲರು, ಉಪನ್ಯಾಸಕರು ಆಗಿ ಅದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಮೈಥಿಲಿ, ಜಯದೇವ್, ಜಿ ಪುಟ್ಟಸ್ವಾಮಿ, ಶಿವಣ್ಣ ಹಾಗೂ ಸತ್ಯನಾರಾಯಣ ರವರನ್ನು ಗೌರವಿಸುವ ಹಾಗೆಯೇ ಕುಟುಂಬ ಸಮೇತ ಸರ್ವರೂ ವಿದ್ಯಾರ್ಥಿ ಜೀವನದಿಂದ ಕಲಿತ ಜೀವನ ಮೌಲ್ಯಗಳನ್ನು ಹಾಗೂ ಸಾಮಾಜಿಕ ಪ್ರಕ್ರಿಯೆಯನ್ನು ಸಂಸ್ಕೃತಿ ಪರಂಪರೆ ,ದಿವ್ಯ ಚೈತನ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ದಿಕ್ಕಿನಲ್ಲಿ ಕುಟುಂಬದ ಎಲ್ಲ ಸದಸ್ಯರು ಪರಸ್ಪರ ಸೇರುವ ಮೂಲಕ ಪ್ರೀತಿ ವಿಶ್ವಾಸ ಸ್ನೇಹಕ್ಕೆ ಗೌರವ ತರುವಂತಹ ಅಪರೂಪದ ಸಮಾರಂಭ ನಡೆಯಲಿದೆ.

ಬನ್ನಿ ಭಾಗವಹಿಸಿ ಗುರುವಂದನೆಯಲ್ಲಿ ಎಲ್ಲರೂ ಪಾಲ್ಕೊಳ್ಳೋಣ. ಗುರು ಭಾರತೀಯ ಸಂಸ್ಕೃತಿಯಲ್ಲಿ ಅಪಾರ ಮೌಲ್ಯವಿರುವ ವ್ಯಕ್ತಿತ್ವ .ಗುರು ಸ್ಥಾನ ಎಂದೆಂದೂ ಬೆಲೆಕಟ್ಟಲಾಗದ ಮರೆಯಲಾಗದ ಸ್ಥಾನ. ಗುರುವಿಗೆ ದೇವರಿಗಿಂತಲೂ ಹೆಚ್ಚಿನ ಗೌರವವಿರುವುದನ್ನು ಹಾಗೂ ನಮ್ಮ ಸಮಾಜ ಸದಾಕಾಲ ಸ್ಮರಿಸುವ ಹಾಗೂ ಪ್ರೀತಿಸುವ ಗುರು ಸ್ಥಾನಕ್ಕೆ ಗೌರವ ಸಲ್ಲಿಸುವ ಮೂಲಕ ಕೃತಜ್ಞತೆಯ ಭಾವವನ್ನು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಉತ್ತಮ ನಾಗರೀಕರನಾಗಿ ಜವಾಬ್ದಾರಿಯುತ ಸೇವಕರಾಗಿ ಶಿಕ್ಷಕರಾಗಿ ರೂಪಿಸಿದ ಶಿಕ್ಷಕರುಗಳಿಗೆ ಅನಂತ ಅನಂತ ವಂದನೆಗಳನ್ನು ಸಲ್ಲಿಸುವ ಮೂಲಕ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ ಸರ್ವರೂ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಸ್ನೇಹ ಸಮಾಗಮದ ಸ್ನೇಹಿತರಾದ ಶ್ರೀರಂಗಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ನಿವೃತ್ತ ಶಿಕ್ಷಕರಾದ ಸಿದ್ದಲಿಂಗು, ನಿವೃತ್ತ ಶಿಕ್ಷಕರಾದ ನಾಗರಾಜು , ಹುಣಸೂರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ಹುಣಸೂರು ರಂಗಸ್ವಾಮಿ ಚೆಲುವೇಗೌಡ ,ಶಶಿಧರ್ ಮುಂತಾದವರ ಸಂಘಟನೆ ಹಾಗೂ ಶ್ರಮದಿಂದ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

ಸುರೇಶ್ ಎನ್ ಋಗ್ವೇದಿ
ಉಪನ್ಯಾಸಕರು
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜನಗರ.



