ಬೆಂಗಳೂರು : ನಟ ಪುನೀತ್ ರಾಜ್ಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರು ಮಾಡಿದ ಸಾಧನೆ ಎಲ್ಲರಿಗೂ ಸ್ಫೂರ್ತಿ ಆಗಿದೆ. ಬಾಲನಟನಾಗಿ ಚಿತ್ರರಂಗದಲ್ಲಿ ಮಿಂಚಿ, ಹೀರೋ ಆಗಿಯೂ ಜನಮನ ಗೆದ್ದ ಪುನೀತ್ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದರು. ಅವರ ಸಾಧನೆಯ ಕಥೆ ಅನೇಕರಿಗೆ ಸ್ಫೂರ್ತಿ ಆಗುತ್ತದೆ. ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ ಪುನೀತ್ ರಾಜ್ಕುಮಾರ್ ಅವರ ಜೀವನದ ಕಥೆ ಈಗ ಶಾಲಾ ಪಠ್ಯಪುಸ್ತಕದಲ್ಲಿ ಸೇರ್ಪಡೆ ಆಗಲಿದೆ. ಆ ಬಗ್ಗೆ ತಯಾರಿ ನಡೆದಿದೆ. ಇದು ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಸಖತ್ ಸಂತಸ ತಂದಿದೆ.
ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಈ ವಿಷಯವನ್ನು ಪರಿಗಣಿಸಲು ‘ಪಠ್ಯ ಪುಸ್ತಕ ಸಂಘ’ ತೀರ್ಮಾನಿಸಿದೆ. ಅಂದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಶಾಲೆಗಳ ಪಠ್ಯಪುಸ್ತಕದಲ್ಲಿ ಪುನೀತ್ ರಾಜ್ಕುಮಾರ್ ಅವರ ಸಾಧನೆಗಳನ್ನು ಸೇರಿಸಲಾಗುವುದು. ಆ ಮೂಲಕ ಮುಂದಿನ ಪೀಳಿಗೆಗೆ ಪುನೀತ್ ರಾಜ್ಕುಮಾರ್ ಬಗ್ಗೆ ತಿಳಿಸಿಕೊಡಲಾಗುವುದು.
ಪುನೀತ್ ರಾಜ್ಕುಮಾರ್ ಅವರು ಜನಿಸಿದ್ದು 1975ರ ಮಾರ್ಚ್ 17ರಂದು. ಬಾಲನಟನಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಸಿನಿಮಾಗಳಿಗೆ ನಟಿಸಿ ಭೇಷ್ ಎನಿಸಿಕೊಂಡರು. ‘ ಬೆಟ್ಟದ ಹೂವು’ ಸಿನಿಮಾಗಾಗಿ ‘ಅತ್ಯುತ್ತಮ ಬಾಲ ನಟ’ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು. ‘ಅಪ್ಪು’ ಸಿನಿಮಾದ ಮೂಲಕ 2002ರಲ್ಲಿ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು.
30ಕ್ಕೂ ಅಧಿಕ ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ ಅವರು ಹೀರೋ ಆಗಿ ಅಭಿನಯಿಸಿದರು. ಹಲವು ಬಗೆಯ ಪಾತ್ರಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಮೂಲಕವೂ ಅವರು ಜನರಿಗೆ ಹತ್ತಿರ ಆಗಿದ್ದರು. ಈ ಎಲ್ಲ ಅಂಶಗಳನ್ನು ಪಠ್ಯಪುಸ್ತಕದ ಮೂಲಕ ಮುಂದಿನ ಪೀಳಿಗೆಗೆ ತಿಳಿಸಲಾಗುವುದು.
ಈ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಬಹಳ ಖುಷಿಯಾಗಿದೆ. ಈ ಗೌರವಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ತಂದೆಗೆ ಸಿಕ್ಕ ದೊಡ್ಡ ಗೌರವ ಇದು ಎಂದು ನಮ್ಮ ಮಕ್ಕಳಿಗೆ ತಿಳಿದಿದೆ. ಚಿತ್ರರಂಗದಲ್ಲಿ ಹಲವರು ಇದ್ದಾರೆ. ಆದರೆ ಈ ರೀತಿಯ ಗೌರವ ಎಲ್ಲರಿಗೂ ಸಿಗುವುದಿಲ್ಲ’ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.



