ಮಂಡ್ಯ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪಕ್ಷಕ್ಕೆ ಮಾಡಿದ ಕೆಲಸ ಹಾಗೂ ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕಾಗುವ ಉಪಯೋಗ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಮಂಡ್ಯ ಜಿಲ್ಲೆಯ ಮದ್ದೂರು ಶಾಸಕ ಕದಲೂರು ಉದಯ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಸದ್ಯ ರಾಜ್ಯದಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿದೆ. ಹೀಗಾಗಿ ಈ ಗೊಂದಲಗಳಿಗೆ ತೆರೆ ಎಳೆಯಿರಿ ಎಂದು ಶಾಸಕರ ನಿಯೋಗ ದೆಹಲಿಗೆ ಹೋಗಿದೆ. ಹೈಕಮಾಂಡ್ ಮುಂದೆ ಇದೇ ವಿಚಾರವನ್ನು ಅವರುಗಳು ಮಾತನಾಡುತ್ತಾರೆ ಎಂದು ಅವರಲ್ಲಿ ಇದ್ದ ಇಬ್ಬರು ನನಗೆ ಹೇಳಿದ್ದಾರೆ ಎಂದರು.
ಎಲ್ಲಾ ಗೊಂದಲಗಳಿಗೂ ಶೀಘ್ರದಲ್ಲಿ ಪರಿಹಾರವನ್ನು ಹೈಕಮಾಂಡ್ ಕೊಡಲಿದೆ ಎಂಬ ನಂಬಿಕೆ ಇದೆ. ಸಿದ್ದರಾಮಯ್ಯ ಅವರ ಆಡಳಿತ ಹಾಗೂ ನಾಯಕತ್ವದ ಬಗ್ಗೆ ನಮಗೆ ಪ್ರಶ್ನೆಗಳಿಲ್ಲ. ಡಿ.ಕೆ ಶಿವಕುಮಾರ್ ಅವರ ಪಕ್ಷ ಸಂಘಟನೆ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ನನ್ನನ್ನು ಒಳಗೊಂಡಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆಯೋ ಅದಕ್ಕೆ ನಾವು ಬದ್ಧವಾಗಿ ಇರುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ, ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂದು ತಿಳಿಸಿದರು.



