ಮಂಡ್ಯ: ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ತಿಥಿ ಸಿನಿಮಾದ ಮೂಲಕ ಪ್ರಸಿದ್ಧಿ ಪಡೆದ ಗಡ್ಡಪ್ಪ @ ಚನ್ನೇಗೌಡ (89) ಇಂದು ನಿಧನರಾದರು. ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಗಡ್ಡಪ್ಪ, ಮೂಲತಃ ಚನ್ನೇಗೌಡ ಎನ್ನುವ ಹೆಸರಿನಿಂದ ಪ್ರಸಿದ್ಧರಾಗಿದ್ದರು, ಆದರೆ ತಿಥಿ ಚಿತ್ರದ ಪಾತ್ರದ ಮೂಲಕ “ಗಡ್ಡಪ್ಪ” ಎಂಬ ಹೆಸರೇ ಜನಮನದಲ್ಲಿ ಉಳಿಯಿತು. ಅವರು ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿದಂತೆ ಎಂಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟು ಬಂದು ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನ ಹೊಂದಿದರು. ಸಂಜೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರಿ ಶೋಭಾ ತಿಳಿಸಿದ್ದಾರೆ.



