ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆ ಸಮೀಪ ನಿರ್ಮಿಸಿರುವ ಸುಸಜ್ಜಿತ ಗಾಂಧಿ ಭವನ ನಾಳೆ ಅ 2ರಂದು ಉದ್ಘಾಟನೆಗೆ ಸಜ್ಜಾಗಿದೆ.
2016-17ನೇ ಸಾಲಿನ ಆಯವ್ಯಯದಲ್ಲಿ ಪ್ರತಿ ಜಿಲ್ಲಾಕೇಂದ್ರದಲ್ಲಿ ಗಾಂಧಿ ಭವನ ನಿರ್ಮಿಸಲು ಘೋಷಿಸಲಾಯಿತು. ಅದರಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಭವನ ನಿರ್ಮಿಸಲು ಉದ್ದೇಶಿಸಿ 3 ಕೋಟಿ ರೂ. ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ 2019ರಲ್ಲಿ ಕಾಮಗಾರಿ ಆರಂಭವಾಯಿತು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಜೀಯವರ ವಿಚಾರಧಾರೆಗಳನ್ನು ಪ್ರಚುರ ಪಡಿಸುವ ಉದ್ದೇಶದಿಂದ ಭವನ ನಿರ್ಮಾಣವಾಗಿದೆ. ಸಿಮ್ಸ್ ಬೋಧನಾ ಆಸ್ಪತ್ರೆಯ ಪಕ್ಕದಲ್ಲೇ 1.2 ಎಕರೆ ಪ್ರದೇಶದಲ್ಲಿ ಭವನ ನಿರ್ಮಿಸಲಾಗಿದೆ.
ಗಾಂಧಿ ಭವನವು ಗ್ರಂಥಾಲಯ, ವಸ್ತು ಸಂಗಹಾಲಯ, ವಿವಿಧೋದ್ದೇಶ ಸಭಾಂಗಣ ಒಳಗೊಂಡಿದೆ. ಒಳಾಂಗಣದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ಗ್ರಂಥಾಲಯದಲ್ಲಿ 3 ಸಾವಿರ ಪುಸ್ತಕಗಳನ್ನು ಇಡಲಾಗಿದೆ. ವಿಶಾಲವಾದ ಸುತ್ತುಗೋಡೆ ಇದ್ದು, ಹೊರಾಂಗಣದಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸಲಾಗುತ್ತಿದೆ.
ಗಾಂಧಿ ಜಯಂತಿಯಂದು ಗಾಂಧಿ ಭವನ ಉದ್ಘಾಟನೆಯಾಗುತ್ತಿರುವುದು ವಿಶೇಷವಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೂತನ ಗಾಂಧಿ ಭವನದಲ್ಲೇ ಈ ಬಾರಿಯ 154ನೇ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ.
