Monday, September 8, 2025
Google search engine

Homeರಾಜ್ಯಸುದ್ದಿಜಾಲಮದ್ದೂರಿನಲ್ಲಿ ಗಣೇಶ ವಿಸರ್ಜನೆ ಗಲಭೆ ಮುಂದುವರಿಕೆ: ಇಂದು ಮತ್ತೆ ಕಲ್ಲು ತೂರಾಟ, ಲಾಠಿಚಾರ್ಜ್, ಪರಿಸ್ಥಿತಿ ಉದ್ವಿಗ್ನ

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಗಲಭೆ ಮುಂದುವರಿಕೆ: ಇಂದು ಮತ್ತೆ ಕಲ್ಲು ತೂರಾಟ, ಲಾಠಿಚಾರ್ಜ್, ಪರಿಸ್ಥಿತಿ ಉದ್ವಿಗ್ನ

ಮದ್ದೂರು : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ಪ್ರಾರಂಭವಾದ ಧಾರ್ಮಿಕ ಗಲಭೆ ಮತ್ತು ಕಲ್ಲು ತೂರಾಟದ ಪ್ರಕರಣ ಹೊಸ ತಿರುವು ಪಡೆದಿದ್ದು, ಇಂದು ಕೂಡ ಪ್ರತಿಭಟನೆ ವೇಳೆ ಗೊಂದಲ ಸಂಭವಿಸಿದೆ. ಹಿಂದೂಪರ ಸಂಘಟನೆಗಳ ಕರೆಗೆ ಮದ್ದೂರಿನಲ್ಲಿ ಬಂದ್ ಜಾರಿಯಲ್ಲಿದ್ದರೂ, ಕೆಲವು ಕಿಡಿಗೇಡಿಗಳ ಕಲ್ಲು ತೂರಾಟದಿಂದ ಸ್ಥಳದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದೆ.

ಪೊಲೀಸರ ಲಾಠಿಚಾರ್ಜ್: ಕಿಡಿಗೇಡಿಗಳ ಮೇಲೆ ಕ್ರಮ: ಮದ್ದೂರಿನಲ್ಲಿ ಇಂದು ನಡೆದ ಪ್ರತಿಭಟನೆಯ ವೇಳೆ ಕೆಲವು ಅಪರಿಚಿತ ಯುವಕರು ಮತ್ತೆ ಕಲ್ಲು ತೂರಾಟ ನಡೆಸಿದ ಕಾರಣ, ಸ್ಥಳದಲ್ಲಿದ್ದ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಯಿತು. ಮಸೀದಿ ಸಮೀಪ ಪ್ರತಿಭಟನೆಯ ಸಮಯದಲ್ಲಿ ಹಿಂದೂ ಕಾರ್ಯಕರ್ತರು ಕರ್ಪೂರ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.

ಈ ಸಂದರ್ಭದಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು ಮೊಳಗಿದ್ದು, ಮುಸ್ಲಿಂ ಸಮುದಾಯದ ಧ್ವಜವನ್ನು ಕೆಳಗೆ ಇಳಿಸಿ, ಹಿಂದೂ ಧ್ವಜವನ್ನು ಹಾರಿಸಿದ ಘಟನೆಯೂ ನಡೆದಿದೆ. ಈ ಘಟನೆಯು ಮದ್ದೂರಿನ ಹೂವಿನ ಸರ್ಕಲ್ ಬಳಿ ನಡೆದಿದೆ.

ಕಾನೂನು ಮತ್ತು ಭದ್ರತಾ ಕ್ರಮಗಳು: ಸಮಾಧಾನಕರ ಪರಿಸ್ಥಿತಿ ಕಾಪಾಡಲು ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಸೆಕ್ಷನ್ ೧೪೪ (ಪ್ರತಿಬಂಧಕಾಜ್ಞೆ) ಅನ್ನು ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ, ಇಂದು ಬೆಳಿಗ್ಗೆ ೬ ಗಂಟೆಯಿಂದ ನಾಳೆ ಮಧ್ಯಾಹ್ನ ೧೨ ಗಂಟೆಯವರೆಗೆ ಯಾವುದೇ ಸಮಾವೇಶ ಅಥವಾ ಮೆರವಣಿಗೆಗಳಿಗೆ ಅನುಮತಿ ಇಲ್ಲ.

ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿತರಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ಡ್ರೋನ್ ಮೂಲಕ ನಿಗಾ ವಹಿಸಲಾಗುತ್ತಿದೆ. ಮದ್ದೂರಿನಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಿರುವ ಬಗ್ಗೆ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular