ಮಂಗಳೂರು: ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಕುಡುಪುವಿನಲ್ಲಿ ಎ.27ರಂದು ಕ್ರಿಕೆಟ್ ಪಂದ್ಯಾಟದ ವೇಳೆ ಸಂಭವಿಸಿದ ಗುಂಪು ಹತ್ಯೆ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಕೇರಳ ಮೂಲದ ಅಶ್ರಫ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಥಳಿಸಿ ಹತ್ಯೆಗೈದಿದ್ದರು. ಈ ಘಟನೆ ಬಗ್ಗೆ ಸ್ಥಳೀಯರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರೂ ಕೂಡ, ಪೊಲೀಸರು ಸೂಕ್ತ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ಗಂಭೀರತೆ ಪಡೆದ ಬಳಿಕ, ಪೊಲೀಸರು 20 ಆರೋಪಿಗಳನ್ನು ಬಂಧಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ.ಆರ್, ಹೆಡ್‌ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ.
ಮೊದಲು ಯುಡಿಆರ್ ಪ್ರಕರಣವಾಗಿ ದಾಖಲಾಗಿದ್ದ ಈ ಘಟನೆಯನ್ನು ಬಳಿಕ ಗುಂಪು ಹತ್ಯೆ ಪ್ರಕರಣವಾಗಿ ಪರಿಗಣಿಸಲಾಗಿದೆ. ಪೊಲೀಸರು ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡದೇ, ಪ್ರಕರಣ ಮುಚ್ಚಲು ಯತ್ನಿಸಿದ್ದ ಆರೋಪ ಉಂಟಾಗಿದೆ. ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.