ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಗ್ರಾಮೀಣ ಕೃಪಾಂಕ ಕಲ್ಪಿಸಿಕೊಡುವ ಮೂಲಕ ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗಕ್ಕೆ ದಾರಿ ದೀಪವಾಗಿದ್ದರು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹಣಗೆರೆಕಟ್ಟೆ ಗ್ರಾಮದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು. ದೇವರಾಜ ಅರಸ್ ನಂತರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದವರು ಬಂಗಾರಪ್ಪನವರು. ಅವರ ಜ್ಞಾನ ಪ್ರತಿಭೆ ಅಪಾರವಾಗಿದ್ದು, ಆದರ್ಶ ವ್ಯಕ್ತಿಯಾಗಿ ಬಾಳಿದ ಅವರು ಬದುಕಿನಲ್ಲಿ ಹೋರಾಟ ಮನೋಭಾವವನ್ನು ಬೆಳೆಸಿಕೊಂಡಿದ್ದರು. ಅದೇ, ಹಾದಿಯಲ್ಲಿ ನಾನೂ ಕೂಡಾ ಸಾಗುತ್ತೇನೆ ಎಂದು ಹೇಳಿದರು.