ಮೈಸೂರು: ವಿದ್ಯಾರ್ಥಿನಿಯರು ಓದುವುದರ ಜೊತೆಗೆ ಮಾನವೀಯತೆ ಮತ್ತು ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕೆಂದು ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಗೌರವ ಸಲಹೆಗಾರರಾದ ದೇವನೂರು ಬಸವರಾಜು ಕರೆ ನೀಡಿದರು.
ರಾಮಕೃಷ್ಣನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಭೀಮನಮನ ಹಾಗೂ ನಿಲಯದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ಮಾನವೀಯತೆ ಹೃದಯವಂತಿಕೆ ಇರುವ ಜನರು ಕಡಿಮೆಯಾಗುತ್ತಿರುವುದರಿಂದ ತಾಯಿ ಹೃದಯ ಇರುವ ಹೆಣ್ಣು ಮಕ್ಕಳಲ್ಲಿ ಮಾನವೀಯತೆ ಹೃದಯವಂತಿಕೆ ಇರಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ನಗುನಗುತ ಇರಬೇಕಾದರೆ ಕಷ್ಟಗಳನ್ನು ಗೆಲುವಿನ ಮೆಟ್ಟಲಾಗಿ ಮಾಡಿಕೊಂಡು ಗುರಿ ಸಾಧಿಸಬೇಕು ಎಂದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯ ಸಲಹೆಗಾರರಾದ ಡಾ. ಎಸ್. ತುಕಾರಾಂ ಮಾತನಾಡಿ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ಜ್ಞಾನದ ಭಂಡಾರವಾಗಿ ಕೆಲಸ ಮಾಡುತ್ತಿದೆ. ಸ್ನಾತಕೋತ್ತರ ಪದವಿಯಲ್ಲಿ ೧೦ ಚಿನ್ನದ ಪದಕ ಪಡೆದ ತೇಜಸ್ವಿನಿಯ ಸಾಧನೆ ಇಲಾಖೆಯ ಬಹುದೊಡ್ಡ ಸಾಧನೆಯಾಗಿದೆ. ನಿಮ್ಮ ಬದುಕಿಗೆ ನೀವೇ ಕಣ್ಗಾವಲಾಗಿ ಬಾಳಬೇಕು. ತಂದೆ ತಾಯಿಯವರ ಬದುಕನ್ನು ನೋಡಿಕೊಂಡು ಬದುಕಿನಲ್ಲಿ ಗುರಿ ಉದ್ದೇಶ ಈಡೇರುವ ತನಕ ತಾಳ್ಮೆಯಿಂದ ಕಾದು ದೀಪದಂತೆ ಎಲ್ಲಾ ಕಷ್ಟಗಳನ್ನು ದಾಟಿ ಬುದ್ಧ ಗುರು ಹೇಳಿದಂತೆ ನಿಮಗೆ ನೀವೇ ಬೆಳಕಾಗಬೇಕು. ಸಾವಿತ್ರಿ ಬಾಪುಲೆ, ಫಾತಿಮಾಬಿ ಯವರ ಬದುಕನ್ನು ಪ್ರತಿಯೊಬ್ಬರು ಓದಬೇಕು ಎಂದರು.
ಸಮಾರಂಭದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ೧೦ ಚಿನ್ನದ ಪದಕ ಪಡೆದ ಕೆ. ತೇಜಸ್ವಿನಿ ಹೆಚ್ಚು ಅಂಕ ಪಡೆದ ಸಂಜನಾ, ಆರತಿಯವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಿಲಯ ಪಾಲಕರಾದ ಹೆಚ್.ಎಂ. ಕಮಲಾಕ್ಷಿ, ಕಾಮಾಕ್ಷಮ್ಮ, ಚಂದ್ರಮ್ಮ, ಮಹೇಶ್, ಪವಿತ್ರ, ಮೋಹನ್‌ಕುಮಾರಿ, ಶಾಂತಲಾ, ಶಶಿಕಲಾ, ಪೂಜಾ ಶುಂಠಿಯಾನ, ಹರ್ಷಿತಾ ನಿರೂಪಿಸಿದರು.