ಬೆಳಗಾವಿ : ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿರುವುದಾಗಿ ಆರೋಪಿಸಿರುವ ದಂಪತಿಯೊಬ್ಬರು, ತಮಗೆ ನ್ಯಾಯ ಸಿಗದಿದ್ದರೆ ದಯಾಮರಣ ಸತ್ಯಾಗ್ರಹ ನಡೆಸುವುದಾಗಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಕಿತ್ತೂರು ಪಟ್ಟಣದ ನಿವಾಸಿಗಳಾದ ಮಂಜುನಾಥ ರುದ್ರಪ್ಪ ಸವದಿ ಹಾಗೂ ಶೃತಿ ಮಂಜುನಾಥ ಸವದಿ, ತಮ್ಮ ಮನೆಗೆ ಬರುತ್ತಿದ್ದ ಕುಡಿಯುವ ನೀರಿನ ಸಂಪರ್ಕವನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದ ದಂಪತಿ ಕುಡಿಯುವ ನೀರಿನ ಸೌಲಭ್ಯ ಇಲ್ಲದ ಕಾರಣ ಕುಟುಂಬ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಮಾನಸಿಕ ಹಾಗೂ ಆರ್ಥಿಕ ಒತ್ತಡ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಕ್ಷಣ ನೀರು ಪೂರೈಕೆ ಮರುಸ್ಥಾಪಿಸಿ, ತಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರಲ್ಲದೆ, ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಜುಲೈ 6ರಿಂದ ಕಿತ್ತೂರು ಪಟ್ಟಣ ಪಂಚಾಯಿತಿ ಕಚೇರಿ ಎದುರು ದಯಾಮರಣ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಮನವಿ ಸ್ಥಳೀಯ ಆಡಳಿತದ ಗಮನ ಸೆಳೆದಿದ್ದು, ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.



