ಬೆಂಗಳೂರು: “ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಹೇಳಿಕೆ ಖಂಡನೀಯ. ಸುಪ್ರೀಂ ಕೋರ್ಟ್ ನಲ್ಲಿ ನಾವು ಸಲ್ಲಿಸಿರುವ ಅರ್ಜಿ ಹಿಂಪಡೆದು, ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ. ಅವರು ಅದನ್ನು ತಡೆಯಲಿ, ನಾನೂ ನೋಡುತ್ತೇನೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಗುಡುಗಿದ್ದಾರೆ.
ನೀರಾವರಿ ಸಚಿವರೂ ಆಗಿರುವ ಶಿವಕುಮಾರ್ ಅವರು ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಮಹದಾಯಿ ಯೋಜನೆ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ಗೋವಾ ಸಿಎಂ ನೀಡಿರುವ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಡಿಸಿಎಂ ಅವರು ಹೀಗೆ ಪ್ರತಿಕ್ರಿಯಿಸಿದರು.
ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಮಾತನಾಡಿದ್ದಾರೆ. ಅವರಿಗೆ ದೇಶದ ಒಕ್ಕೂಟ ವ್ಯವಸ್ಥೆ ಮೇಲೆ ಗೌರವವಿಲ್ಲ. ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣದ ತೀರ್ಪು ಹೊರಬಿದ್ದಿದೆ. ಯೋಜನೆ ಜಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು, ಸ್ಥಳೀಯ ಸಂಸದರು ಹಾಗೂ ಕೇಂದ್ರದ ಹಾಲಿ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಈ ಯೋಜನೆ ಜಾರಿಯಾಗಲಿದೆ ಎಂದು ಸಂಭ್ರಮಾಚರಣೆ ಮಾಡಿದ್ದರು” ಎಂದರು.
ರಾಜ್ಯದ ಗೌರವ ಉಳಿಸಲು ಎಲ್ಲಾ ಸಂಸದರು ಒಟ್ಟಾಗಿ ಹೋರಾಡಬೇಕು
“ಈ ವಿಚಾರವಾಗಿ ರಾಜ್ಯದ ಎಲ್ಲಾ ಸಂಸದರನ್ನು ಭೇಟಿ ಮಾಡುತ್ತೇನೆ. ಇದು ನಮ್ಮ ರಾಜ್ಯದ ಸ್ವಾಭಿಮಾನದ ಪ್ರಶ್ನೆ. ಈ ವಿಚಾರದಲ್ಲಿ ನಮ್ಮ ಸಂಸದರು ಬಾಯಿ ಮುಚ್ಚಿಕೊಂಡಿರುವುದೇ ದೊಡ್ಡ ತಪ್ಪು. ನಮ್ಮ ರಾಜ್ಯದ 28 ಲೋಕಸಭೆ ಸದಸ್ಯರು, 12 ರಾಜ್ಯಸಭೆ ಸದಸ್ಯರು ಒಗ್ಗಟ್ಟಿನಿಂದ ಹೋರಾಡಿ ರಾಜ್ಯದ ಗೌರವ ಕಾಪಾಡಬೇಕಾಗಿದೆ. ಗೋವಾದ ಕೇವಲ ಒಂದು ಸಂಸದರಿಗಾಗಿ ನಮ್ಮ ಕರ್ನಾಟಕವನ್ನು ಮಾರಿಕೊಳ್ಳಲು ಸಾಧ್ಯವಿಲ್ಲ. ಈ ವಿಚಾರವಾಗಿ ಬಿಜೆಪಿ ಸಂಸದರು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸರಕಾರದ ಸಚಿವರು ಹಾಗೂ ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹಾಕಬೇಕು. ನಾನು ಕೂಡ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ಸಮಯಾವಕಾಶ ಕೇಳುತ್ತೇನೆ. ಎಲ್ಲಾ ಸಂಸದರ ನಿಯೋಗವನ್ನು ಕರೆದೊಯ್ಯುವ ಪ್ರಯತ್ನ ಮಾಡುತ್ತೇನೆ. ನಮ್ಮ ಜೊತೆ ಎಲ್ಲರೂ ಬರುವ ನಂಬಿಕೆ ಇದೆ. ಯಾರು ಬರುತ್ತಾರೋ ಬಿಡುತ್ತಾರೋ ನಮ್ಮ ಕೆಲಸ ನಾವು ಮಾಡುತ್ತೇವೆ” ಎಂದು ತಿಳಿಸಿದರು.
ಸರ್ವಪಕ್ಷ ಸಭೆ ಕರೆಯುತ್ತೀರಾ ಎಂದು ಕೇಳಿದಾಗ, “ಎಲ್ಲಾ ಪಕ್ಷಗಳ ಸಂಸದರ ಸಭೆ ಕರೆಯುವುದಾಗಿ ಹೇಳಿದ್ದೇನೆ” ಎಂದರು.
ಮಹದಾಯಿ ಯೋಜನೆ ವಿಚಾರದಲ್ಲಿ ಕೇಂದ್ರ ಸಚಿವರು ದಾರಿ ತಪ್ಪಿಸುತ್ತಿದ್ದಾರಾ ಎಂದು ಕೇಳಿದಾಗ, “ಕೇಂದ್ರ ಜಲಶಕ್ತಿ ಸಚಿವರು ಈ ವಿಚಾರದಲ್ಲಿ ನಿಷ್ಪಕ್ಷಪಾತವಾಗಿದ್ದಾರೆ. ಅವರು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನಾನು ಅವರನ್ನು ಐದಾರು ಬಾರಿ ಈ ವಿಚಾರಕ್ಕಾಗಿ ಭೇಟಿ ಮಾಡಿದ್ದೇನೆ. ಕೇಂದ್ರ ಅರಣ್ಯ ಸಚಿವರು ಕೂಡ ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಬೆಂಬಲವಾಗಿದ್ದಾರೆ. ಎಲ್ಲಾ ಸಮಸ್ಯೆ ಇರುವುದು ಗೋವಾದಲ್ಲಿ” ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಅವರ ಆರೋಪ ನಿಜ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾನದಲ್ಲೂ ಗೋಲ್ಮಾಲ್ ನಡೆದಿದೆ:
ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಮತಗಳ್ಳತನವಾಗಿದೆ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಒಪ್ಪುತ್ತೇನೆ. ನಾನು ಕೂಡ ಈ ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತನಿಖೆ ನಡೆಸಿದ್ದೇನೆ. ಇಲ್ಲಿ ಅನೇಕ ಗೋಲ್ಮಾಲ್ ಗಳು ನಡೆದಿವೆ. ಈ ವಿಚಾರವಾಗಿ ಸಧ್ಯಕ್ಕೆ ನಾನು ಹೆಚ್ಚು ವಿಚಾರ ಪ್ರಸ್ತಾಪ ಮಾಡುವುದಿಲ್ಲ. ಮುಂದೆ ಈ ವಿಚಾರವಾಗಿ ಮಾತನಾಡುತ್ತೇನೆ” ಎಂದರು.