Thursday, May 22, 2025
Google search engine

Homeರಾಜ್ಯಕನಸಿನಲ್ಲಿ ಕಾಣಿಸಿದಂತೆ ಜಮೀನು ಅಗೆದಾಗ ಗೋಪಾಲಕೃಷ್ಣ ದೇವರ ವಿಗ್ರಹ ಪತ್ತೆ: ದೇವಸ್ಥಾನಕ್ಕೆ ಜಮೀನು ಬಿಟ್ಟುಕೊಟ್ಟ ಮುಸ್ಲಿಂ...

ಕನಸಿನಲ್ಲಿ ಕಾಣಿಸಿದಂತೆ ಜಮೀನು ಅಗೆದಾಗ ಗೋಪಾಲಕೃಷ್ಣ ದೇವರ ವಿಗ್ರಹ ಪತ್ತೆ: ದೇವಸ್ಥಾನಕ್ಕೆ ಜಮೀನು ಬಿಟ್ಟುಕೊಟ್ಟ ಮುಸ್ಲಿಂ ವ್ಯಕ್ತಿ

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ  ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲಿನಲ್ಲಿ ಮುಸ್ಲಿಂ ಧರ್ಮದ ವ್ಯಕ್ತಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಾಲಯ ಇರುವ ಬಗ್ಗೆ ವ್ಯಕ್ತಿಯೊಬ್ಬರಿಗೆ ಕನಸು ಬಿದ್ದಿದೆ. ಅದರಂತೆ ಜೆಸಿಬಿ ಮೂಲಕ ಜಮೀನು ಅಗೆದಾಗ ನಶಿಸಿ ಹೋಗಿದ್ದ ನೂರಾರು ವರ್ಷಗಳ ಹಿಂದಿನ ಗೋಪಾಲಕೃಷ್ಣ ದೇವರ ವಿಗ್ರಹ ಪತ್ತೆಯಾಗಿದೆ. ಹೀಗಾಗಿ ಮುಸ್ಲಿಂ ವ್ಯಕ್ತಿ ತನ್ನ ವಶದಲ್ಲಿದ್ದ ಜಮೀನನ್ನು ದೇವಸ್ಥಾನಕ್ಕೆ ಬಿಟ್ಟುಕೊಟ್ಟ ಸೌಹಾರ್ದ ಘಟನೆ ‌ನಡೆದಿದೆ.

ಬೆಂಗಳೂರು ಮೂಲದ ಲಕ್ಷ್ಮಣ್ ಎಂಬವರು ತೆಕ್ಕಾರಿನಲ್ಲಿ ಜಮೀನು ಖರೀದಿಸಿದ್ದರು. ಇವರಿಗೆ ಬಿದ್ದ ಕನಸಿನಲ್ಲಿ ತಾನು ಖರೀದಿಸಿದ ಜಮೀನಿನ ಪಕ್ಕದಲ್ಲಿರುವ ಮುಸ್ಲಿಂ ವ್ಯಕ್ತಿ ಅಹ್ಮದ್​ ಬಾವ ಅವರಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಸ್ಥಾನ ಇರುವ ಸುಳಿವು ಸಿಕ್ಕಿದೆ. ಈ ಬಗ್ಗೆ ಲಕ್ಷ್ಮಣ್ ಅವರು ಗ್ರಾಮದ ಜನರಿಗೆ ಮಾಹಿತಿ ನೀಡಿದ್ದರು.

ಅದರಂತೆ ಜ್ಯೋತಿಷಿಗಳ ಮೂಲಕ ಚಿಂತನೆ ನಡೆಸಿದಾಗ ಭೂಗರ್ಭದಲ್ಲಿ ದೇವರಿರುವ ಬಗ್ಗೆ ಸುಳಿವು ಸಿಕ್ಕಿದೆ. ಹೀಗಾಗಿ ಜೆಸಿಬಿ ಮೂಲಕ ಭೂಮಿಯ ಅಗೆತ ನಡೆಸಿದ್ದರು. ಹತ್ತಾರು ಅಡಿ ಅಗೆಯುತ್ತಿದ್ದಂತೆ ಭಗ್ನಗೊಂಡ ಗೋಪಾಲ ಕೃಷ್ಣ ದೇವರ ವಿಗ್ರಹ ಪತ್ತೆಯಾಗಿದೆ.

ಅದರಂತೆ, ವಿಗ್ರಹ ಪತ್ತೆಯಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರು ತೀರ್ಮಾನಿಸಿದ್ದು, ಹಾಮದ್ ಅವರು ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಬಿಟ್ಟುಕೊಟ್ಟಿದ್ದಾರೆ. ಅಹ್ಮದ್ ಅವರಿಗೆ ಪೂರ್ವಜರಿಂದ ಕೃಷಿ ಭೂಮಿ ಬಂದಿತ್ತು. ಸರ್ವೆ ನಡೆಸಿದಾಗ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಗಿದೆ.

ನೂರಾರು ವರ್ಷಗಳ ಹಿಂದೆ ದಂಡಯಾತ್ರೆ ವೇಳೆ ಟಿಪ್ಪು ಸುಲ್ತಾನ್ ದಾಳಿಗೆ ಗೋಪಾಲಕೃಷ್ಣ ದೇವಸ್ಥಾನ ತುತ್ತಾಗಿದೆ ಎನ್ನಲಾಗಿದೆ. ಹತ್ತಾರು ವರ್ಷಗಳ ಹಿಂದೆಯೇ ಗ್ರಾಮದಲ್ಲಿ ದೇವಸ್ಥಾನ ಇರುವ ಬಗ್ಗೆ ಪ್ರಶ್ನಾಚಿಂತನೆ ವೇಳೆ ಬಯಲಾಗಿದೆ.

ಅಲ್ಲದೇ ಕೆಲ ಹಿರಿಯರ ಮಾಹಿತಿಯಂತೆ ಮುಸ್ಲಿಂ ವ್ಯಕ್ತಿಯ ಜಾಗದಲ್ಲಿ ದೇವಸ್ಥಾನವಿದ್ದ ಮಾಹಿತಿ ಹಿನ್ನೆಲೆ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಮಾಡಿಕೊಂಡು ದೇವಸ್ಥಾನ ಶೋಧ ಆರಂಭಿಸಲಾಗಿತ್ತು. ಆದರೆ ನಿಖರ ಜಾಗದ ಮಾಹಿತಿ ಇಲ್ಲದ ಕಾರಣ ಗ್ರಾಮಸ್ಥರು ಸುಮ್ಮನಾಗಿದ್ದರು.

ಆದರೆ 10 ವರ್ಷಗಳ ಹಿಂದೆ ಬೆಂಗಳೂರು ಮೂಲದ ಲಕ್ಷ್ಮಣ ಎಂಬವರಿಂದ ತೆಕ್ಕಾರು ಬಳಿ ಜಾಗ ಖರೀದಿ ಮಾಡಲಾಗಿತ್ತು. ಈ ವೇಳೆ ಪ್ರಶ್ನಾ ಚಿಂತನೆ ವೇಳೆ ಲಕ್ಷ್ಮಣರ ಜಾಗದ ಸಮೀಪವೇ ದೇವಸ್ಥಾನ ಇರುವ ಸುಳಿವು ಸಿಕ್ಕಿದೆ. ಆದರೆ ಲಕ್ಷ್ಮಣರ ಜಾಗದ ಸನಿಹ ಅಹ್ಮದ್ ಬಾವಾ ಎಂಬವರ ಜಾಗವಿತ್ತು.

ಈ ಮಧ್ಯೆ ಲಕ್ಷ್ಮಣ್ ಅವರ ಕನಸಿನಲ್ಲಿ ವಿಷ್ಣು ದೇವರು ಬಂದು ಇರುವಿಕೆ ತೋರಿದ್ದರು. ಬಾವಿಯ ಆಳದಲ್ಲಿ ವಿಷ್ಣುವಿನ ವಿಗ್ರಹದ ಮಾದರಿಯಲ್ಲಿ ಲಕ್ಷ್ಮಣರಿಗೆ ಕನಸು ಬಿದ್ದಿದೆ. ಅದರಂತೆ ಮತ್ತೆ ಪ್ರಶ್ನಾ ಚಿಂತನೆ ಹಾಕಿದಾಗ ಮುಸ್ಲಿಂ ವ್ಯಕ್ತಿಯ ಜಾಗದಲ್ಲಿ ದೇವಸ್ಥಾನ ಇರುವ ಮಾಹಿತಿ ತಿಳಿದುಬಂದಿದೆ.

ಅದರಂತೆ ಜಾಗದ ದಾಖಲೆ ಪರಿಶೀಲಿಸಿದಾಗ ಅದು ಸರ್ಕಾರಿ ಜಾಗ ಎಂಬುದು ಪತ್ತೆಯಾಗಿದೆ. ಹೀಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹಕಾರದಲ್ಲಿ ಮುಸ್ಲಿಂ ವ್ಯಕ್ತಿಯ ಜಾಗದ ಸರ್ವೇ ನಡೆಸಲಾಗಿದೆ. ಸರ್ವೇ ವೇಳೆ 25 ಸೆಂಟ್ಸ್ ಜಾಗ ಸರ್ಕಾರಿ ಎಂಬುದು ಪತ್ತೆಯಾದ ಹಿನ್ನೆಲೆ ಅಹ್ಮದ್ ಬಾವಾ ಅಡಿಕೆ ಗಿಡ ನೆಟ್ಟಿದ್ದ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಬಳಿಕ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್​​ನಿಂದ ಜಾಗ ದೇವಸ್ಥಾನ ನಿರ್ಮಾಣಕ್ಕೆ ನೀಡಲು ಡಿಸಿಗೆ ಮನವಿ ಮಾಡಲಾಗಿದೆ. ಅದರಂತೆ ಜಿಲ್ಲಾಧಿಕಾರಿ ಧಾರ್ಮಿಕ ದತ್ತಿ ಇಲಾಖೆಗೆ ದೇವಸ್ಥಾನ ನಿರ್ಮಿಸಲು ಜಾಗ ಕಾಯ್ದಿರಿಸಿದ್ದಾರೆ.

ಹೀಗಾಗಿ ಜೆಸಿಬಿಯಲ್ಲಿ ಉತ್ಖನನದ ವೇಳೆ ಹತ್ತಾರು ಅಡಿ ಆಳದ ಬಾವಿಯಲ್ಲಿ ಕನಸಿನಲ್ಲಿ ಬಂದಂತೆ ಮೂಲ ದೇವರ ವಿಗ್ರಹ ಪತ್ತೆಯಾಗಿದೆ. ಸದ್ಯ ಸುತ್ತಲಿನ ತನ್ನ 75 ಸೆಂಟ್ಸ್ ಜಾಗವನ್ನೂ ಸೌಹಾರ್ದಯುತವಾಗಿ ದೇವಸ್ಥಾನ ಟ್ರಸ್ಟ್​ಗೆ ಅಹ್ಮದ್ ಬಾವಾ ಮಾರಾಟ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular