ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ನಿನ್ನೆ ಗುಜರಾತ್ನ ಐತಿಹಾಸಿಕ ಕ್ಷೇತ್ರ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಈ ಭೇಟಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದು, ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಬಡವರಿಗಾಗಿ ಏನು ಮಾಡಿದ್ದಾರೆ ಹೇಳಿ? ಬರೀ ಹಳೆಯ ಗುಡಿ ಗುಂಡಾರಗಳಿಗೆ ಅಡ್ಡಾಡುತ್ತಿದ್ದಾರೆ. ದೇವರು ನಿಮ್ಮ ಕೆಲಸಗಳಿಂದ ಪ್ರಸನ್ನವಾಗುತ್ತಾನೆಯೇ ಹೊರತು ಗುಡಿಗೆ ಹೋಗಿ ಗಂಟೆ ಬಾರಿಸಿದರೆ ದೇವರು ಪ್ರಸನ್ನ ಆಗ್ತಾನಾ ಎಂದು ವ್ಯಂಗ್ಯವಾಡಿದ್ದಾರೆ.
ಮುಂದುವರೆದು, ಸೋಮನಾಥ ದೇವಸ್ಥಾನಕ್ಕೆ ಸಾವಿರ ವರ್ಷ ಆಯ್ತು ಎಂದು ಈಗ ಮೋದಿಗೆ ಆ ದೇವಾಲಯ ನೆನಪಾಗಿದೆ. ಈ ಮುಂಚೆ ಏಕೆ ಈ ದೇವಸ್ಥಾನ ನೆನಪಾಗಲಿಲ್ಲ? ಮುಂಬರುವ ಹಲವು ರಾಜ್ಯಗಳ ಚುನಾವಣೆ ದೃಷ್ಟಿಯಿಂದ ಮೋದಿ ಈ ರೀತಿ ಮಾಡುತ್ತಿದ್ದಾರೆ. ಇಂತಹ ಜನರಿಗೆ ಬುದ್ದಿ ಕಲಿಸುವ ಕೆಲಸ ಜನ ಮಾಡಬೇಕು ಅಂತ ಖರ್ಗೆ ಕರೆಕೊಟ್ಟರು.
ಇನ್ನೂ ರೈತರ ಬಗ್ಗೆ ಮೂರು ಕೆಟ್ಟ ಕಾನೂನು ತಂದರು. ಕೊನೆಗೆ ರೈತರು ದಂಗೆ ಎದ್ದ ಮೇಲೆ, 700 ಜನ ಸತ್ತ ಮೇಲೆ ಮೋದಿ ವಾಪಸ್ ತಗೊಂಡರು. ಇದೇ ಸ್ಥಿತಿ ಮನರೇಗಾ ವಿಚಾರದಲ್ಲೂ ಬರುತ್ತದೆ. ಅದಕ್ಕೂ ಮುನ್ನವೇ ಮೋದಿ ಅವರೇ ಎಚ್ಚರಗೊಳ್ಳಿ, ಮನರೇಗಾ ಯೋಜನೆ ವಾಪಸ್ ಕೊಡಿ ಎಂದು ಖರ್ಗೆ ಆಗ್ರಹಿಸಿದರು.
ಅಲ್ಲದೆ ಕೇಂದ್ರ ಸರ್ಕಾರ ಮನರೆಗಾ ತೆಗೆದು ಜಿ ರಾಮ್ ಜಿ ಅಂತ ತಂದಿದ್ದಾರೆ. ಬಡವರ ಹಕ್ಕು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಇದನ್ನು ತಂದಿದೆ. ಮನರೆಗಾವನ್ನು ಬಡವರ ಹೊಟ್ಟೆ ತುಂಬಲು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ಆದರೆ ಈ ಕೇಂದ್ರ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯಲು ಮುಂದಾಗಿದೆ. ಆದರೆ ಅದರ ಬಗ್ಗೆ ನಮ್ಮ ಭಾಗದ ಜನ ನಮ್ಮ ನಾಯಕರು ಮಾತಾಡಿಲ್ಲ ಎಂದು ಬೇಸರ ಹೊರಹಾಕಿದರು.
ಅಷ್ಟಲ್ಲದೆ ಸಂದರ್ಭ ಬಂದರೆ ಅದರ ವಿರುದ್ಧ ಹೋರಾಡಲು ಸಜ್ಜಾಗಿ ಎಂದು ಕರೆ ನೀಡಿದರು. ಒಂದು ಸಾವಿರ ಕೋಟಿ ರೂಪಾಯಿ ಅಡಿಗಲ್ಲು ಸಮಾರಂಭ ಇಲ್ಲಿ ನೆರವೇರಿಸಲು ಬಂದಿದ್ದೇವೆ. 2 ಸಾವಿರ ಕೋಟಿ ರೂಪಾಯಿ ಕಾಮಗಾರಿಗೆ ಸರ್ಕಾರ ಖರ್ಚು ಮಾಡ್ತಾ ಇದೆ. 371 ಜೆ ಲಾಭ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಿಕ್ಕಿದೆ ಎಂದರು.



