ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಏರ್ ಪೋರ್ಟ್ ನಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳ್ಳತನ ಪ್ರಕರಣದಲ್ಲಿ 4 ಮಂದಿ ಸಿಬ್ಬಂದಿ ಸೇರಿ ಐವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಲೋಡಿಂಗ್ – ಅನ್ ಲೋಡಿಂಗ್ ಮಾಡುವ ಸಾಟ್ಸ್ ನೌಕರರಾದ ನಿತಿನ್, ಮೂಡುಪೆರಾರದ ನಿವಾಸಿಗಳಾದ ಸದಾನಂದ, ರಾಜೇಶ್, ಬಜ್ಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ಮತ್ತು ಚಿನ್ನಾಭರಣ ಪಡೆದುಕೊಂಡು ಚಿನ್ನದ ಗಟ್ಟಿಯಾಗಿಸಿದ್ದ ಬಜ್ಪೆ ಮೂಡುಪೆರಾರ ನಿವಾಸಿ ರವಿರಾಜ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸಿಆರ್‌ಪಿಎಫ್ ಜವಾನ ಹರಿಕೇಶ್ ಎಂಬವರ ಪತ್ನಿ ರಾಜೇಶ್ವರಿ ಪದ್ಮಶಾಲಿ ಅವರು ಆ.30ರಂದು ಬೆಂಗಳೂರಿನಿಂದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರ ಲಗೇಜ್ ಟ್ರೋಲಿ ಬ್ಯಾಗನ್ನು ತೆರದು 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಅವರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಬಜ್ಪೆ ಪೊಲೀಸ್ ನಿರೀಕ್ಷಕ ಸಂದೀಪ್ ಅವರು ತನಿಖೆ ಆರಂಭಿಸಿ ವಿಮಾನ ನಿಲ್ದಾಣದ ಲೋಡ್ ಮತ್ತು ಅನ್ ಲೋಡ್ ಮಾಡುತ್ತಿದ್ದ ನಾಲ್ಕು ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಚಿನ್ನಾಭರಣ ಕದ್ದು ಬಜ್ಪೆ ಮೂಡುಪೆರಾರ ನಿವಾಸಿ ರವಿರಾಜ್ ಎಂಬಾತನಿಗೆ ಮಾರಿರುವುದಾಗಿ ತಪ್ಪೊಪ್ಪಿಕೊಂಡಿದ್ದರು.
ಆರೋಪಿಗಳ ಹೇಳಿಗೆ ಅನುಸರಿಸಿ ರವಿರಾಜ್ ನನ್ನು ಬಂಧಿಸಿದ ಬಜ್ಪೆ ಪೊಲೀಸರು ಆತನ ಬಳಿಯಿಂದ ಮಹಿಳೆಯ ಚಿನ್ನಾಭರಣವನ್ನು ಕರಗಿಸಿ ಮಾಡಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.