ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎರಡು ದಶಕಗಳಷ್ಟು ಹಳೆಯ ನರೇಗಾ ಯೋಜನೆ ಬದಲಿಗೆ ಜಿ ರಾಮ್ ಜಿ ಮಸೂದೆಯನ್ನು ಮಂಡಿಸಿ ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಸಹ ಸಿಕ್ಕಿದೆ. ಈ ಬಗ್ಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಿಪಿಎಂ ರಾಜ್ಯಸಭಾ ಸಂಸದ ಜಾನ್ ಬ್ರಿಟಾಸ್, ಕೇಂದ್ರವು ಈಗ ಕರೆನ್ಸಿ ನೋಟುಗಳಿಂದ ಮಹಾತ್ಮ ಗಾಂಧಿಯವರ ಚಿತ್ರವನ್ನು ತೆಗೆದು ಹಾಕಲು ಮುಂದಾಗಿದೆ ಎಂದು ಹೇಳಿದ್ದಾರೆ.
ಕರೆನ್ಸಿಗಳಿಂದ ಮಹಾತ್ಮಾ ಗಾಂಧೀಜಿ ಚಿತ್ರವನ್ನು ತೆಗೆಯುವ ಯಾವುದೇ ಪ್ರಸ್ತಾವನೆ ಪರಿಗಣನೆಯಲ್ಲಿ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪದೇ ಪದೇ ನಿರಾಕರಿಸಿದರೂ ಈ ಆರೋಪ ಬಂದಿದೆ. ದೆಹಲಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಿಟಾಸ್, ಈ ವಿಷಯದ ಕುರಿತು ಉನ್ನತ ಮಟ್ಟದ ಸಭೆ ಈಗಾಗಲೇ ನಡೆದಿದ್ದು, ಕೇಂದ್ರ ಸರ್ಕಾರ ಬದಲಾವಣೆ ಮಾಡಲು ಹೊರಟಿದೆ ಎಂದಿದ್ದಾರೆ. ಮೊದಲ ಸುತ್ತಿನ ಚರ್ಚೆಗಳು ಈಗಾಗಲೇ ಉನ್ನತ ಮಟ್ಟದಲ್ಲಿ ನಡೆದಿವೆ.
ಇದು ಕೇವಲ ಊಹಾಪೋಹವಲ್ಲ. ನಮ್ಮ ಕರೆನ್ಸಿಯಿಂದ ಗಾಂಧೀಜಿಯವರ ಚಿತ್ರ ತೆಗೆದುಹಾಕುವುದು ರಾಷ್ಟ್ರದ ಚಿಹ್ನೆಗಳನ್ನು ಪುನಃ ಬರೆಯುವ ದೊಡ್ಡ ಪ್ರಯತ್ನದ ಭಾಗವಾಗಿದೆ ಎಂದು ಬ್ರಿಟಾಸ್ ಹೇಳಿದರು.
ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧೀಜಿಯವರ ಚಿತ್ರವನ್ನು ಪರ್ಯಾಯ ಚಿಹ್ನೆಯೊಂದಿಗೆ ಬದಲಿಸಲು ಪರಿಗಣಿಸಬಹುದು. ಭಾರತದ ಸಂಸ್ಕೃತಿಗೆ ಉತ್ತಮ ಪರ್ಯಾಯವಾಗಿ ಭಾರತ ಮಾತೆಯ ಚಿತ್ರವನ್ನು ಹಾಕುವ ಚಿಂತನೆಯಲ್ಲಿ ಸರ್ಕಾರ ಇರಬಹುದು. ಸರ್ಕಾರದ ಚರ್ಚೆಯ ಆಯ್ಕೆಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ. ಆದಾಗೀಯೂ, ಕರೆನ್ಸಿ ನೋಟುಗಳ ವಿನ್ಯಾಸದ ನಿರ್ಧಾರವು ಕೇಂದ್ರದೊಂದಿಗೆ ಸಮಾಲೋಚಿಸಿ ಆರ್‌ಬಿಐ ತೆಗೆದುಕೊಳ್ಳುತ್ತದೆ ಎಂದು ಸರ್ಕಾರದ ಮೂಲಗಳು ಸಮರ್ಥಿಸಿಕೊಂಡಿವೆ.
ಸರ್ಕಾರವು ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಮಸೂದೆ, 2025 ರ ವಿಕಸಿತ ಭಾರತ ಗ್ಯಾರಂಟಿಯನ್ನು ಪರಿಚಯಿಸಿದ ನಂತರ, ಮಹಾತ್ಮಾ ಗಾಂಧೀಜಿ ಹೆಸರನ್ನು ಕೈಬಿಟ್ಟು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆಗೆ ಬದಲಾವಣೆಗಳನ್ನು ಮಾಡಿದ ನಂತರ ಪ್ರತಿಪಕ್ಷಗಳ ಅಸಮಾಧಾನದ ನಡುವೆ ಈಗ ನೋಟುಗಳಲ್ಲಿ ಗಾಂಧಿ ಚಿತ್ರದ ವಿಚಾರ ಮುನ್ನೆಲೆಗೆ ಬಂದಿದೆ.
ರಾಮನ ಹೆಸರನ್ನು ಹೇಳುವ ಮೂಲಕ ಸರ್ಕಾರವು ನರೇಗಾ ಯೋಜನೆಯನ್ನು ರಾಜಕೀಯಗೊಳಿಸುತ್ತಿದೆ ಮತ್ತು ಮಹಾತ್ಮ ಗಾಂಧಿಯವರ ಪರಂಪರೆಯನ್ನು ಅಳಿಸಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ವಿಶ್ವದ ಅತಿದೊಡ್ಡ ಗ್ರಾಮೀಣ ಉದ್ಯೋಗ ಕಾರ್ಯಕ್ರಮವಾಗಿರುವ ನರೇಗಾ ಯೋಜನೆಯನ್ನು ಸರ್ಕಾರ ದುರ್ಬಲಗೊಳಿಸಲು ಹೊರಟಿದೆ ಎಂಬುದು ವಿರೋಧ ಪಕ್ಷದವರ ಆರೋಪವಾಗಿದೆ.



