ಮೈಸೂರು : ನಗರದ ಕುರುಬಾರಹಳ್ಳಿ ವ್ಯಾಪ್ತಿಯ ಸರ್ವೆ ನಂ.4ಕ್ಕೆ ಸಂಬಂಧಿಸಿದ ಯುಎಲ್ಸಿ ಜಮೀನು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಗ್ರಿಮೆಂಟ್ ವಿವಾದದ ನಡುವೆಯೇ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದೆ.
ಈ ಜಮೀನು ಕುರಿತಾಗಿ ಶಾಸಕ ಶ್ರೀವತ್ಸ ಅವರು ದಾಖಲೆ ಸಮೇತವಾಗಿ ಗಂಭೀರ ಆರೋಪಗಳನ್ನು ಹೊರ ಹಾಕಿದ್ದರು. ಸರಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಲು ಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕಗೊಳಿಸಿ ಗಮನ ಸೆಳೆದಿದ್ದರು.
ಈ ಬೆಳವಣಿಗೆಯಿಂದ ಎಚ್ಚೆತ್ತ ಜಿಲ್ಲಾಡಳಿತ, ತಕ್ಷಣವೇ ಪರಿಶೀಲನೆ ನಡೆಸಿ ವಿವಾದಾತ್ಮಕ ಅಗ್ರಿಮೆಂಟ್ ಅನ್ನು ರದ್ದುಪಡಿಸಿದೆ. ಅಲ್ಲದೆ, ಆ ಜಮೀನು ಸರಕಾರಿ ಸ್ವತ್ತೆಂಬುದನ್ನು ಸ್ಪಷ್ಟಪಡಿಸುವಂತೆ ಆರ್ಟಿಸಿ ದಾಖಲೆಗಳಲ್ಲಿ ಸರಕಾರಿ ಜಾಗ ಎಂದು ನಮೂದಿಸಲಾಗಿದೆ.
ಇದರೊಂದಿಗೆ ಸ್ಥಳದಲ್ಲೇ ಸರಕಾರಿ ಜಮೀನು ಎಂಬ ಫಲಕವನ್ನು ಅಳವಡಿಸುವ ಮೂಲಕ ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಜಮೀನು ವಿವಾದಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದ್ದು, ಸಾರ್ವಜನಿಕ ವಲಯದಲ್ಲಿ ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನೂ ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಪ್ರಯತ್ನಗಳನ್ನು ಕಟ್ಟಿಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



