Friday, January 23, 2026
Google search engine

Homeರಾಜಕೀಯರಾಜ್ಯಪಾಲರ ಭಾಷಣ ಕಡಿತ : ಅಮಿತ್ ಶಾ ವಿರುದ್ಧ ಬೇಳೂರು ಗೋಪಾಲಕೃಷ್ಣ ಕಿಡಿ

ರಾಜ್ಯಪಾಲರ ಭಾಷಣ ಕಡಿತ : ಅಮಿತ್ ಶಾ ವಿರುದ್ಧ ಬೇಳೂರು ಗೋಪಾಲಕೃಷ್ಣ ಕಿಡಿ

ಬೆಂಗಳೂರು : ಕರ್ನಾಟಕದ ವಿಧಾನ ಮಂಡಲದ ಅಧಿವೇಶನದಲ್ಲಿ ತೀರಾ ಅಪರೂಪ ಎನ್ನುವ ಘಟನೆಗೆ ರಾಜ್ಯದ ಜನರು ಸಾಕ್ಷಿಯಾಗಬೇಕಾಯಿತು. ರಾಜ್ಯಪಾಲರು ಸಂಪೂರ್ಣ ಭಾಷಣ ಮಾಡದೆ ಅರ್ಧಕ್ಕೆ ಭಾಷಣವನ್ನು ಮೊಟಕುಗೊಳಿಸಿದ್ದರು. ಇನ್ನೂ ಈ ವಿದ್ಯಮಾನದ ಬಗ್ಗೆ ಕಾಂಗ್ರೆಸ್ಸಿನ ಶಿವಮೊಗ್ಗ ಜಿಲ್ಲೆ, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ದಕ್ಷಿಣ ಭಾರತದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರವಿದೆ, ಅಲ್ಲೆಲ್ಲಾ ರಾಜ್ಯಪಾಲರು ಹದ್ದುಮೀರಿ ಕೆಲಸವನ್ನು ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಸರ್ಕಾರದ ಭಾಷಣವನ್ನು ಕಡೆಗಣಿಸುವ ರಾಜ್ಯಪಾಲರ ಧೋರಣೆಯನ್ನು ನಾವು ಖಂಡಿಸುತ್ತೇವೆ. ನಾವು, ರಾಜ್ಯಪಾಲರನ್ನು ವಜಾ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಬೇಳೂರು ಗೋಪಾಲಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

ಮುಂದುವರೆದು ಪೂರ್ತಿ ಭಾಷಣವನ್ನು ಓದದೇ ಓಡಿ ಹೋಗುವಂತದ್ದು ರಾಜ್ಯಪಾಲರಿಗೆ ಏನಿತ್ತು? ಬಹುಷಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿರಬೇಕು, ಎರಡು ನಿಮಿಷ ವಿಧಾನಸಭೆಗೆ ಹೋಗಿ, ಎರಡು ಮಾತಾಡಿ ಪಟ್ ಅಂತ ವಾಪಸ್ ಬನ್ನಿ ಎಂದು ಹಾಗೂ ಈ ರೀತಿ, ಬಿಜೆಪಿಯ ರಾಷ್ಟ್ರೀಯ ನಾಯಕರು ತೀರ್ಮಾನವನ್ನು ಮಾಡಿರಬೇಕು ಎಂದು ಬೇಳೂರು ಗೋಪಾಲಕೃಷ್ಣ ಗುರುತರ ಆರೋಪವನ್ನು ಮಾಡಿದ್ದಾರೆ.

ಅಲ್ಲದೆ ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರು ನಮಗೆ ಬೇಕಾಗಿಲ್ಲ. ಸಂವಿಧಾನಕ್ಕೆ ಮತ್ತು ರಾಷ್ಟಗೀತೆಗೆ ಅವಮಾನ ಮಾಡಿದಂತಹ ವಿದ್ಯಮಾನ ಇದಾಗಿದ್ದು, ನಾವೆಲ್ಲಾ, ದೆಹಲಿಯಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಮುಂದೆ ಉಪವಾಸ ಸತ್ಯಾಗ್ರಹವನ್ನು ಮಾಡೋಣ ಎಂದು ಮುಖ್ಯಮಂತ್ರಿಗಳಿಗೂ ಹೇಳಿದ್ದೇನೆ ಎಂದರು. ಅಲ್ಲದೆ ಅವರ ಆಡಳಿತವಿರುವ ರಾಜ್ಯಗಳಲ್ಲಿ ಇಂತಹ ವಿದ್ಯಮಾನಗಳು ನಡೆಯುವುದಿಲ್ಲ, ಬಿಜೆಪಿ ಹೊರತಾದ ರಾಜ್ಯಗಳಲ್ಲಿ ಮಾತ್ರ ಕೇಂದ್ರ ಸರ್ಕಾರ ಈ ರೀತಿ ವರ್ತಿಸುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ಧೋರಣೆಯನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ವ್ಯಾಜ್ಯಗಳಿದ್ದವು, ಹಾಗಾಗಿ ಅಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿರಲಿಲ್ಲ. ರಾಷ್ಟ್ರಗೀತೆಯನ್ನು ಬಿಜೆಪಿಯವರು ಸ್ವೀಕಾರ ಮಾಡದೇ ಇದ್ದರೆ ಎಂತವರಿಗೂ ಕೋಪ ಬಂದೇ ಬರುತ್ತೆ. ನನಗೂ ಇಂದಿನ ವಿದ್ಯಮಾನ ಸಿಟ್ಟನ್ನು ತರಿಸಿದೆ ಎಂದು ಬೇಳೂರು ಗೋಪಾಲಕೃಷ್ಣ, ಸದನದಲ್ಲಿ ಕಾಂಗ್ರೆಸ್ಸಿನವರು ಧಿಕ್ಕಾರ ಕೂಗಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular