ನವದೆಹಲಿ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ ತರಲು ಚಿಂತನೆ ನಡೆಸುತ್ತಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ 12% ಜಿಎಸ್ಟಿ ಸ್ಲ್ಯಾಬ್‌ನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದರಲ್ಲಿ ಒಳಗೊಂಡಿರುವ ವಸ್ತುಗಳನ್ನು 5% ಅಥವಾ 18% ಸ್ಲ್ಯಾಬ್ಗೆ ವರ್ಗಾವಣೆ ಮಾಡುವ ಬಗ್ಗೆ ಯೋಚನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
12% ಸ್ಲ್ಯಾಬ್‌ನಲ್ಲಿರುವ ಬಹುತೆಕ ವಸ್ತುಗಳು ಜನಸಾಮಾನ್ಯರ ದಿನನಿತ್ಯದ ಬಳಕೆಯ ದೈನಂದಿನ ಜೀವನದಲ್ಲಿ ಬಳಸುವ ಸರಕುಗಳಾಗಿವೆ. ಬೆಣ್ಣೆ, ಚೀಸ್, ತುಪ್ಪ, ಪಾಸ್ತಾ, ಫ್ರೂಟ್ ಜ್ಯೂಸ್, ಟೂತ್‌ಪೇಸ್ಟ್, ಸಾಬೂನು, ಶಾಂಪೂ, ಟಾಯ್ಲೆಟರಿ ವಸ್ತುಗಳು, 1,000 ರೂ.ಗಿಂತ ಕಡಿಮೆ ಬೆಲೆಯ ಉಡುಪುಗಳು, ಔಷಧಿಗಳು, ಕ್ರೀಡಾ ಸಾಮಗ್ರಿಗಳು ಸೇರಿದಂತೆ ಹಲವು ವಸ್ತುಗಳು ಈ ಸ್ಲ್ಯಾಬ್‌ಗೆ ಸೇರಿವೆ.
ಈ ಸ್ಲ್ಯಾಬ್ ರದ್ದಾದರೆ ಮತ್ತು ವಸ್ತುಗಳನ್ನು 5% ಗೆ ಸೇರಿಸಿದರೆ, ನೇರವಾಗಿ ಇವುಗಳ ಮಾರುಕಟ್ಟೆ ದರ ಕಡಿಮೆಯಾಗುವ ಸಾಧ್ಯತೆ ಇದೆ. ಇದು ಮಧ್ಯಮ ಮತ್ತು ಬಡ ವರ್ಗದ ಜನರಿಗೆ ದೊಡ್ಡ ನೆಮ್ಮದಿಯನ್ನು ನೀಡಬಹುದು.
56ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಈ ತಿಂಗಳ ಕೊನೆಗೆ ಸಭೆ ನಡೆಯಬಹುದು. ಕೇಂದ್ರ ಹಣಕಾಸು ಸಚಿವರು ಅಧ್ಯಕ್ಷತೆ ವಹಿಸುವ ಈ ಮಂಡಳಿಯು ತೆರಿಗೆ ದರ ಬದಲಾವಣೆ ಶಿಫಾರಸು ಮಾಡುವ ಅಧಿಕಾರ ಹೊಂದಿದೆ.