ಮೈಸೂರು : ಸಣ್ಣ ಸಣ್ಣ ವರ್ತಕರ ಮೇಲೆ ಜಿ.ಎಸ್.ಟಿ ನೋಟಿಸ್ ನೀಡಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ, ಜಿ.ಎಸ್.ಟಿ ಮೂಲಕ ಸಣ್ಣ ವ್ಯಾಪಾರಿಗಳನ್ನು ಕೇಂದ್ರ ಸರ್ಕಾರ ಕೊಲೆ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಆದಾಯ ತೆರಿಗೆ ಕಚೇರಿ ಮುಂಭಾಗದ ರಸ್ತೆಯಲ್ಲೇ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತರಕಾರಿ, ಹಣ್ಣು, ಬೇಕರಿ, ಸೊಪ್ಪು ಮಾರಾಟ ಮಾಡುವ ವ್ಯಾಪಾರಿಗಳಿಗೆ ಜಿ.ಎಸ್.ಟಿ ಕಟ್ಟುವಂತೆ ನೋಟಿಸ್ ನೀಡಿರುವುದು ಕೇಂದ್ರ ಸರ್ಕಾರ, ಜಿ.ಎಸ್.ಟಿ ರಾಜ್ಯ ಸರ್ಕಾರದ ಅಧೀನದಲ್ಲಿ ಬರುವುದಿಲ್ಲ, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಕೆಲವರು ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದಾಯ ತೆರಿಗೆ ಇಲಾಖೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಟ್ಟರೂ ಕೆಲವು ತೆರಿಗೆಗಳು ಕೇಂದ್ರ ಸರ್ಕಾರಕ್ಕೆ ಒಳಪಡುತ್ತವೆ. ಅದರ ಅನುಸಾರವೇ ಆಧಾಯ ತೆರಿಗೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಹಾಗಾಗಿ ಜಿ.ಎಸ್.ಟಿ. ನೋಟಿಸ್ ನೀಡಿರುವುದು ಕೇಂದ್ರ ಸರ್ಕಾರ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಆಫೀಸ್ ಕಂಟ್ರೋಲರ್, ಡಿಫೆನ್ಸ್ ಕಂಟ್ರೋಲ್ ಬೋರ್ಡ್ ದೆಹಲಿ, ಅವರ ಮೂಲಕ ೨೫.೦೯.೨೦೧೮ ರಲ್ಲಿ ಜಿ.ಎಸ್.ಟಿ ಜಾರಿಗೆ ತಂದಿತು. ಇದನ್ನು ಆಗಲೇ ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರೋಧಿಸಿ ಇದು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಉಲ್ಲೇಖ ಮಾಡಿದ್ದರು. ಆಗ ಜನ ಸಾಮಾನ್ಯರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಇದರ ಪರಿಣಾಮ ಸಣ್ಣ ಸಣ್ಣ ವ್ಯಾಪಾರಿಗಳ ಮೇಲೆ ಬೀಳುತ್ತಿದೆ ಎಂದು ಹೇಳಿದರು.
ಜಿ.ಎಸ್.ಟಿ. ವಿರುದ್ಧ ಹೋರಾಟ ಮಾಡಲು ಮುಂದಾಗಿರುವ ವರ್ತಕರ ಪರ ರಾಜ್ಯ ಸರ್ಕಾರ ನಿಲ್ಲುತ್ತದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತನಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದಾರೆ. ಜಿ.ಎಸ್.ಟಿ. ವಿರುದ್ಧ ಕಾಂಗ್ರೆಸ್ ಪಕ್ಷ ಕೂಡ ಹೋರಾಟ ಮಾಡಲಿದೆ ಎಂದು ಹೇಳಿದರು.
ಜಿ.ಎಸ್.ಟಿ. ಮೂಲಕ ಕೇಂದ್ರ ಸರ್ಕಾರ ಸಣ್ಣ ವ್ಯಾಪಾರಿಗಳನ್ನು ಕೊಲೆ ಮಾಡುತ್ತಿದೆ. ೫೦ ಸಾವಿರ ೧ ಲಕ್ಷ ಜಿ.ಎಸ್.ಟಿ.ಕಟ್ಟಿ ಎಂದು ನೋಟಿಸ್ ನೀಡಿದರೆ ಸಣ್ಣ ವ್ಯಾಪಾರಿಗಳು ಎಲ್ಲಿಂದ ಕಟ್ಟಲು ಸಾಧ್ಯ? ಜಿ.ಎಸ್.ಟಿ. ವಿಧಿಸಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಬಿ.ಎಂ.ರಾಮು, ಮೈಸೂರು ಬಸವಣ್ಣ, ಮೈಸೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್, ಮಾಧ್ಯಮ ವಕ್ತಾರ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.