ಮೈಸೂರು : ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಜೆಡಿಎಸ್ ನಲ್ಲಿದ್ದೇನೆ. ಜೆಡಿಎಸ್ ನಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ವಿರುದ್ಧವೇ ಜಿ.ಟಿ.ದೇವೇಗೌಡ ಕೆಲಸ ಮಾಡಿದರು ಎಂದಿದ್ದಾರೆ.
ಮುಂದುವರೆದು ರಿಜ್ವಾನ್ ಹರ್ಷದ್ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಸ್ಪರ್ಧಿಸಿದ್ದಾಗಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ ಜಿ.ಟಿ.ದೇವೇಗೌಡರು ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿಗೆ ಬೆಂಬಲ ನೀಡಿದರು ಎಂದು ಆರೋಪಿಸಿದರು.
ಸಾ.ರಾ.ಮಹೇಶ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಮರುದಿನವೇ ನಾನು ಜೆಡಿಎಸ್ ನಲ್ಲೇ ಇದ್ದೇನೆ. ಮುಂದೆಯೂ ಜೆಡಿಎಸ್ ನಿಂದಲೇ ಸ್ಪರ್ಧಿಸುವುದಾಗಿ ಜಿಟಿಡಿ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನರೇನು ಕಿವಿಗೆ ಹೂವು ಮುಡಿದುಕೊಂಡಿಲ್ಲ. ಜಿಟಿಡಿ ಗೆ ಸಾಮರ್ಥ್ಯ ಇದ್ದರೆ ಅವರ ಸ್ವಂತ ಶಕ್ತಿಯ ಮೇಲೆ ಗೆದ್ದು ತೋರಿಸಲಿ. ಒಂದು ವೇಳೆ ಪಕ್ಷ ಅವಕಾಶ ನೀಡಿದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲು ನಾನು ಸಿದ್ದನಿದ್ದೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಾ.ರಾ.ಮಹೇಶ್ ನೇತೃತ್ವದಲ್ಲಿ ಚುನಾವಣೆ ಎದುರಿಸುವಂತೆ ಹೆಚ್.ಡಿ.ದೇವೇಗೌಡರು ಸೂಚಿಸಿದ್ದಾರೆ. ಅದರಂತೆ ನಾವೆಲ್ಲರೂ ನಡೆಯುತ್ತೇವೆ. ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 3 ನೇ ಸ್ಥಾನಕ್ಕೆ ಹೋಗಿದ್ದ ಜಿ.ಟಿ.ದೇವೇಗೌಡರನ್ನು ಜೆಡಿಎಸ್ ಗೆ ಕರೆ ತಂದು ಶಾಸಕರನ್ನಾಗಿ ಮಾಡಿದ್ದು ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಾ.ರಾ.ಮಹೇಶ್ ಅವರು.
ಆದರೂ ಕೆ.ಆರ್.ನಗರದಲ್ಲಿ ಸಾ.ರಾ.ಮಹೇಶ್ ಬಲ ಕುಗ್ಗಿಸುವ ಕಾರ್ಯಕ್ಕೆ ಜಿ.ಟಿ.ದೇವೇಗೌಡ ಮುಂದಾದರು. ಜಿ.ಟಿ.ದೇವೇಗೌಡ ನಿರಂತರವಾಗಿ ಪಕ್ಷದ ವಿರುದ್ಧ ಕೆಲಸ ಮಾಡಿಕೊಂಡು ಬಂದಿದ್ದಾರೆ. ಎಂಸಿಡಿಸಿಸಿ ಚುನಾವಣೆಯಲ್ಲಿ ಸ್ವಂತ ಮಗನಾಗಿರುವ ಜಿ.ಡಿ.ಹರೀಶ್ ಗೌಡ ವಿರುದ್ಧ ಜಿಟಿಡಿ ಕೆಲಸ ಮಾಡಿದ್ದಾರೆ. ದೊಡ್ಡಸ್ವಾಮೀಗೌಡ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗಲು ಜಿ.ಟಿ.ದೇವೇಗೌಡ ಬೆಂಬಲ ನೀಡಿದ್ದಾರೆ. ಜಿ.ಟಿ.ಡಿ ಯವರು ಜೆಡಿಎಸ್ ನಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.



