ಬೆಂಗಳೂರು: ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ನೀಡಿರುವ ಒಳಮೀಸಲಾತಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಅಧ್ಯಯನದ ನೆಪದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಬಾರದು ಎಂದು ಮಾಜಿ ಸಚಿವ ಎಚ್.ಆಂಜನೇಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಆ.16ರಂದು ಒಳಮೀಸಲಾತಿ ಜಾರಿ ಮಾಡಬೇಕು. ವರದಿ ಜಾರಿ ಮಾಡದೇ ಇದ್ದರೆ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ. ಈ ವಿಳಂಬವನ್ನು ಕೆಲವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಒಳಮೀಸಲಾತಿ ಕುರಿತು ಗೊಂದಲ ಹುಟ್ಟುಹಾಕುತ್ತಿರುವವರ ಮಾತುಗಳಿಗೆ ಮನ್ನಣೆ ಹಾಕಬಾರದು ಎಂದೂ ಆಗ್ರಹಪಡಿಸಿದ್ದಾರೆ.
ಪರಿಶಿಷ್ಟ ಜಾತಿ ಗುಂಪಿನಲ್ಲಿ 101 ಜಾತಿಗಳ ಮಧ್ಯೆ ಮೀಸಲಾತಿ ಪಡೆಯಲು ಮಾದಿಗ ಸಮುದಾಯಕ್ಕೆ ಸಾಧ್ಯವಾಗಿರಲಿಲ್ಲ. ಈ ಸಮುದಾಯದ ಮುಖಂಡರೇ ಒಳಮೀಸಲಾತಿ ಜಾರಿ ಹೋರಾಟವನ್ನು ಹುಟ್ಟು ಹಾಕಿದ್ದರು. ಈಗ ಒಳ ಮೀಸಲಾತಿ ಜಾರಿಯಾಗುತ್ತಿರುವ ಸಂದರ್ಭದಲ್ಲಿ ಅನಗತ್ಯ ಗೊಂದಲವನ್ನುಂಟು ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.