ಬೆಂಗಳೂರು : ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ.
ಶುಕ್ರವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ಇಬ್ಬರು ನಾಯಕರ ಪುನರಾಯ್ಕೆ ಬಗ್ಗೆ ರಾಷ್ಟ್ರೀಯ ಪ್ರತಿನಿಧಿಗಳು ಒಮ್ಮತ ನಿರ್ಧಾರ ಕೈಗೊಂಡರು.
ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಘಟನೆಗೆ ವಿಫುಲ ಅವಕಾಶಗಳಿವೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಪಕ್ಷ ಸಂಘಟನೆಯನ್ನು ಬಲಿಷ್ಠವಾಗಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿಯೇ ಪಕ್ಷವನ್ನು ಸಂಘಟಿಸುವ ನಿರ್ಧಾರಕ್ಕೆ ರಾಷ್ಟ್ರೀಯ ಮಂಡಳಿ ಬಂದಿತು.
ಸಭೆಯ ಬಳಿಕ ಮಾಧ್ಯಮಗಳಿಗೆ ಈ ಬಗ್ಗೆ ವಿವರಗಳನ್ನು ನೀಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ ಜೆಡಿಎಸ್ ಆಗಿದ್ದು, ಪಕ್ಷಕ್ಕೆ ಈಗ 25 ವರ್ಷ ತುಂಬಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವಿರತ ಶ್ರಮದಿಂದ ಪಕ್ಷ ಇವತ್ತಿಗೂ ಗಟ್ಟಿಯಾಗಿ ಉಳಿದಿದೆ. ಅಸಂಖ್ಯಾತ ಕಾರ್ಯಕರ್ತ ಪಡೆಯನ್ನು ಹೊಂದಿದೆ. ದೇವೇಗೌಡರು ಪಕ್ಷವನ್ನು ಕಟ್ಟಿ ಬೆಳೆಸಿ, ತಮ್ಮ ಬದುಕನ್ನೇ ಪಕ್ಷಕ್ಕೆ ಮೀಸಲು ಇರಿಸಿದ್ದಾರೆ. ಬೆಳ್ಳಿಹಬ್ಬದ ಸಂದರ್ಭದಲ್ಲಿ ಈ ಇಬ್ಬರು ಬಲಿಷ್ಠ ನಾಯಕರೇ ಪಕ್ಷವನ್ನು ಮುನ್ನಡೆಸಬೇಕು ಎಂದು ರಾಷ್ಟ್ರೀಯ ಮಂಡಳಿ ತೀರ್ಮಾನಿಸಿತು ಎಂದು ಅವರು ಹೇಳಿದರು.
ನಿಖಿಲ್ ಕುಮಾರಸ್ವಾಮಿ ರಾಜ್ಯದ ಉದ್ದಗಲಕ್ಕೂ ಕೈಗೊಂಡಿರುವ ಸಂಘಟನಾ ಪ್ರವಾಸ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಯಾಗಿ ಮುಂದುವರಿದ್ದು, ಇದಕ್ಕೆ ಸಭೆಯಲ್ಲಿ ಮೆಚ್ಚಿಗೆ ದೊರೆತಿದೆ. ಎಲ್ಲಾ ನಾಯಕರು ಅವರ ಸಂಘಟನಾ ಶಕ್ತಿಯ ಬಗ್ಗೆ ಶ್ಲಾಘನೆ ಮಾಡಿದರು ಎಂದರು.
ಎರಡು ಪ್ರಮುಖ ನಿರ್ಣಯ ಅಂಗೀಕಾರ: ಜೆಡಿಎಸ್ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ರೈತರ ಪರವಾಗಿ ಹಾಗೂ ಪಕ್ಷ ಸಂಘಟನೆ ಮಾಡುವ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ನಿರ್ಣಯಗಳಿಗೆ ಶನಿವಾರ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಂಗೀಕಾರ ಪಡೆಯಲಾಗುವುದು ಎಂದು ಸುರೇಶ್ ಬಾಬು ಅವರು ಹೇಳಿದರು.
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ್, ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಪರಿಷತ್ ಸದಸ್ಯ ಟಿ.ಎ. ಶರವಣ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಎಚ್.ಎಂ. ರಮೇಶ್ ಗೌಡ, ಜೆಡಿಎಸ್ ಐಟಿ ವಿಭಾಗದ ಅಧ್ಯಕ್ಷ ಚಂದನ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.



