ವರದಿ: ಎಡತೊರೆ ಮಹೇಶ್
ಹೆಚ್.ಡಿ.ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹೆಚ್.ಡಿ ಕೋಟೆ ವತಿಯಿಂದ ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯ 9 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಆಯ್ಕೆ ಮಾಡಿ ಶಿಕ್ಷಕರಿಗೆ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.

ಆದೇಶ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿ. ಭಾಸ್ಕರ್ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ರಾಜ್ಯಾದ್ಯಂತ ಶಿಕ್ಷಕರು ಕೊರತೆಯಿರುವ ಆಯ್ದ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಲಾಗುತಿದೆ ಎಂದರು. ಹೀಗೆ ಹೆಚ್.ಡಿ.ಕೋಟೆ ತಾಲೂಕಿನ ಹೆಚ್ಚು ಮಕ್ಕಳಿರುವ ಶಿಕ್ಷಕರು ಕೊರತೆ ಇರುವ ಹಾಗು ಒಂದು ಶಾಲೆಯಲ್ಲಿ ಒಂದೇ ಶಿಕ್ಷಕರು ಇರುವ 9 ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಲಾಗಿದೆ ಎಂದರು. ಇದರೊಂದಿಗೆ ಶಾಲಾ ಕಟ್ಟಡ ರಚನೆ, ಆವರಣ ರಚನೆ, ಆಟದ ಮೈದಾನ, ಶೌಚಾಲಯ ನಿರ್ಮಾಣ, ಶುದ್ಧ ನೀರಿನ ಪೂರೈಕೆ, ಸಾಲ ಕಟ್ಟಡ ದುರಸ್ತಿ, ಕ್ರೀಡಾ ಮತ್ತು ಬೋಧನಾ ಸಾಮಗ್ರಿಗಳ ಪೂರೈಕೆಗಳಿಗೆ ಅನುದಾನಗಳನ್ನೂ ಡಾ. ವೀರೇಂದ್ರ ಹೆಗ್ಗಡೆ ಯವರು ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಅಡಹಳ್ಳಿ, ಹಂಪಾಪುರ, ಸತ್ತಿಗೆಹುಂಡಿ, ಹಿರೇಹಳ್ಳಿ, ಕೆಂಚನಹಳ್ಳಿ, ಶಾಂತಿಪುರ ಗಾಂಧಿನಗರ, ದಡದಹಳ್ಳಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮತ್ತು ರವೀಂದ್ರ ವಿದ್ಯಾ ಸಂಸ್ಥೆ ಹೆಬ್ಬಲಗುಪ್ಪೆ ಶಾಲೆಗೆ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆ ಆದ 9 ಶಿಕ್ಷಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರತಿ ತಿಂಗಳು ಒಬ್ಬರಿಗೆ 9000 ರೂ ಗೌರವ ಗೌರವಧನ ನೀಡುವುದರ ಬಗ್ಗೆ ತಿಳಿಸಿದರು.

ನಂತರ ಮಾತನಾಡಿದ ನಿವೃತ್ತ ಶಿಕ್ಷಕ ಸ್ವಾಮಿ ಯವರು ಉತ್ತಮ ಜೀವನ ನಡೆಸಲು ಶಿಕ್ಷಣ ಅಗತ್ಯ ಅದರಂತೆ ಶಿಕ್ಷಣ ನೀಡುವ ಶಿಕ್ಷಕರು ಸಮಯ ಪ್ರಜ್ಞೆ ಮತ್ತು ಪಠ್ಯಪುಸ್ತಕ ವಿಷಯವನ್ನು ಮಕ್ಕಳಿಗೆ ಅರ್ಥೈಸಿಸುವುದು ಮತ್ತು ಮಾನವೀಯ ಮೌಲ್ಯ ಗುಣಗಳನ್ನು ರೂಪಿಸುವ ಪಾತ್ರವನ್ನು ಮಾಡಬೇಕೆಂದು ತಿಳಿಸಿದರು. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮ ಮಟ್ಟದಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುತ್ತಿರುವುದು ತುಂಬಾ ಸಂತೋಷಕರ ಎಂದು ತಿಳಿಸಿದರು.

ಶಿಕ್ಷಕರಿಗೆ ಆದೇಶ ಪತ್ರ ಹಸ್ತಾಂತರ ಸಂದರ್ಭ ಶೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ವಿ.ಭಾಸ್ಕರ್, ಪುರಸಭೆ ಸದಸ್ಯರು ಐಡಿಯಾ ವೆಂಕಟೇಶ್, ಮಿಲ್ ನಾಗರಾಜು, ಕೃಷಿ ಮೇಲ್ವಿಚಾರಕ ರಾಜು.ಬಿ.ಜೆ., ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗಣ್ಣ, ನಿವೃತ್ತ ಶಿಕ್ಷಕರು ಸ್ವಾಮಿ, ವಲಯ ಮೇಲ್ವಿಚಾರಕರು ಕೃಷ್ಣಮೂರ್ತಿ, ಮಹಾದೇವ್, ಭೂತಯ್ಯ, ಭಾರತಿ, ದೇವರಾಜ್, ಪವಿತ್ರ, ಶಾಂತಾ, ಸಲೀಮಾ, ವೀಣಾ, ಉಪಸ್ಥಿತರಿದ್ದರು.