ಮೈಸೂರು : ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಮುಂಡಿ ತಾಯಿ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಮಗನ ವಸೂಲಿ ಹೇಗಿದೆ ಎಂಬುದು ಎಲ್ಲಾ ಅಧಿಕಾರಿಗಳಿಗೆ ಗೊತ್ತಿದೆ. ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ನಾನು ನನ್ನ ಮಗನನ್ನು ವಸೂಲಿಗಾಗಿ ರಾಜಕೀಯಕ್ಕೆ ತಂದಿಲ್ಲ. ಜನರ ಅಪೇಕ್ಷೆಯಂತೆ ನಿಖಿಲ್ ರಾಜಕೀಯಕ್ಕೆ ಬಂದಿದ್ದಾನೆ ಎಂದು ಸಿಎಂಗೆ ಟಾಂಗ್ ಕೊಟ್ಟರು.
1999 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಮೇತ ನಾವೆಲ್ಲಾ ಸೋತಿದ್ದೆವು. ಆಗ ಸಿದ್ದರಾಮಯ್ಯ, ಮಹಾದೇವಪ್ಪ ಇಬ್ಬರೂ ದೇವೇಗೌಡರ ಮನೆಗೆ ಬಂದಿದ್ದರು. ಸಿದ್ದರಾಮಯ್ಯ ನಂಗೆ ರಾಜಕೀಯ ಸಾಕು ಅಂತಾ ಕಣ್ಣೀರು ಹಾಕಿದ್ದರು. ಅವತ್ತು ಅವರ ಕಣ್ಣೀರಿಗೆ ಬಕೆಟ್ ಇಟ್ಟಿದ್ದರೂ ಬಕೆಟ್ ತುಂಬುತ್ತಿತ್ತು. ಈ ಘಟನೆಗೆ ನಾನೇ ಸಾಕ್ಷಿ. ದೇವೇಗೌಡರು ಸಿದ್ದರಾಮಯ್ಯಗೆ ಸಮಾಧಾನ ಮಾಡಿ ಧೈರ್ಯ ಹೇಳಿ ಬೇರೆ ವ್ಯವಸ್ಥೆ ಮಾಡಿಕೊಟ್ಟರು. ಇದನ್ನು ಸಿದ್ದರಾಮಯ್ಯ ಮರೆತಿದ್ದಾರೆ ಎಂದು ಕುಟುಕಿದರು.
2006 ರಲ್ಲಿ ಸಿದ್ದರಾಮಯ್ಯ ಅಹಿಂದ ಹೆಸರಲ್ಲಿ ನಮ್ಮ ಪಕ್ಷಕ್ಕೆ ಚೂರಿ ಹಾಕಿದ್ರು. ಸಿದ್ದರಾಮಯ್ಯ ನಮ್ಮ ಪಕ್ಷ ಬಿಟ್ಟಾಗ ಅವರ ಜೊತೆ ಹೋದವರು ಬರೀ 8 ಜನ. ಇದೆಲ್ಲಾ ಸಿದ್ದರಾಮಯ್ಯಗೆ ನೆನಪಿಲ್ವಾ? ಅಹಿಂದ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಬಿಟ್ಟು ಹೊರಗಡೆ ಬಂದು ಐದು ಹತ್ತು ಕಡೆ ಅಭ್ಯರ್ಥಿಗಳ ಗೆಲ್ಲಿಸಲಿ ನೋಡೋಣ ಎಂದು ಹೆಚ್‌ಡಿಕೆ ಸವಾಲು ಹಾಕಿದರು.
ಕಾಂಗ್ರೆಸ್‌ಗೆ ಕೊನೆ ಮೊಳೆ ಹೊಡೆಯೋದು ಸಿದ್ದರಾಮಯ್ಯ. ಅವರನ್ನು ಕಂಡರೆ ಅಸೂಹೆ, ಹೊಟ್ಟೆ ಕಿಚ್ಚು ಇರೋದು ನಮಗಲ್ಲ. ಕಾಂಗ್ರೆಸ್‌ನಲ್ಲೇ ಕೆಲವರಿಗೆ ಸಿದ್ದರಾಮಯ್ಯ ಕಂಡರೆ ಹೊಟ್ಟೆ ಕಿಚ್ಚು ಇದೆ. ರಾಜ್ಯ ಸರ್ಕಾರ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ರಾಜ್ಯಕ್ಕೆ ಹೆಚ್ಚಿನ ಕಾರ್ಖಾನೆ ತರುತ್ತೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡುವುದಿಲ್ಲ. ಸಿದ್ದರಾಮಯ್ಯ ಸ್ವಭಾವ ನಂಗೆ ಗೊತ್ತಿದೆ. ಸಿಎಂ ಸ್ಥಾನಕ್ಕಾಗಿ ಒಬ್ಬರು ಹೆಚ್ಚಾಗಿ ದೇವರ ಮೊರೆ ಹೋಗ್ತಿದ್ದಾರೆ. ದೇವರಿಗೆ ಪ್ರಾರ್ಥನೆ ಮನಸ್ಸು ಪೂರ್ವಕವಾಗಿ ಇರಬೇಕು. ಸ್ವಾರ್ಥಕ್ಕೆ ದೇವರ ಬೇಡಿದರೆ ದೇವರು ಫಲ ಕೊಡಲ್ಲ ಎಂದು ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಟ್ಟರು.



