ಚಿತ್ರದುರ್ಗ : ರಾಜ್ಯಸಭೆಯ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಅವರ ದೇಹ ಇಂದು ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರ ಕೆಲಸಗಳು, ಆಚಾರ-ವಿಚಾರಗಳು ಹಾಗೂ ಜನಸೇವೆಯ ಆದರ್ಶಗಳು ಶಾಶ್ವತವಾಗಿ ಉಳಿಯಲಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚಿತ್ರದುರ್ಗದಲ್ಲಿ ಹೆಚ್.ಹನುಮಂತಪ್ಪ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1979ರಿಂದ ಹನುಮಂತಪ್ಪ ಅವರೊಂದಿಗೆ ನನ್ನ ಒಡನಾಟವಿತ್ತು. ನಾವು ವಿದ್ಯಾರ್ಥಿ ನಾಯಕರಾಗಿದ್ದಾಗ ಅಕ್ಕಪಕ್ಕದ ಕೊಠಡಿಗಳಲ್ಲೇ ವಾಸಿಸುತ್ತಿದ್ದೆವು. ರಾಜಗೋಪಾಲ್ ಹಾಗೂ ಜಾಫರ್ ಷರೀಫ್ ಅವರೊಂದಿಗೆ ಜಿಲ್ಲೆಯ ರಾಜಕೀಯ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲಾ ವರ್ಗದ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಾಯಕ ಅವರು ಎಂದು ಸ್ಮರಿಸಿದರು.
ಇಂದು ಅವರ ದೇಹಕ್ಕೆ ಸಾವು ಬಂದಿರಬಹುದು. ಆದರೆ ಅವರ ಆಚಾರ-ವಿಚಾರಗಳು, ಭಾವನೆಗಳು ಹಾಗೂ ಜನಪರ ಚಿಂತನೆಗಳು ಸದಾ ಜೀವಂತವಾಗಿರುತ್ತವೆ. ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಮಾರ್ಗದರ್ಶನ ನೀಡಿದ್ದ ಅವರು, ಚಿತ್ರದುರ್ಗ ಜಿಲ್ಲೆಯ ಕೃಷಿ ಹಾಗೂ ನೀರಾವರಿ ಯೋಜನೆಗಳಿಗಾಗಿ ನಿರಂತರ ಹೋರಾಟ ನಡೆಸಿದ್ದರು ಎಂದರು.
ಅಲ್ಲದೆ ಹನುಮಂತಪ್ಪ ಅವರು ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಸರಳ ಜೀವನ ನಡೆಸಿದ ಅಪರೂಪದ ನಾಯಕರು. ರಾಜಕೀಯದಲ್ಲಿ ಅನೇಕ ನಾಯಕರಿಗೆ ಮಾರ್ಗದರ್ಶನ ಮತ್ತು ನೆರವು ನೀಡಿದ ಅವರು ಸದಾ ಜನಪರ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ಭದ್ರಾ ಮೇಲ್ದಂಡೆ ಯೋಜನೆ ಮಾತ್ರವಲ್ಲ, ಅನೇಕ ನೀರಾವರಿ ಯೋಜನೆಗಳಿಗಾಗಿ ಅವರು ಸರ್ಕಾರದ ಮಟ್ಟದಲ್ಲೂ, ಸಂಸತ್ತಿನಲ್ಲೂ ಧ್ವನಿ ಎತ್ತಿದ್ದರು. ಜಿಲ್ಲೆಯ ಎಲ್ಲರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಿದ ನಾಯಕರು ಅವರು ಎಂದು ಹೇಳಿದರು.
ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿ, ಈ ವಿಷಯವಾಗಿ ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಬೆಂಗಳೂರು ವಿಭಾಗ ಮಟ್ಟದ ಸಭೆಯನ್ನು ಯಾವಾಗ ನಡೆಸಬೇಕು ಎಂಬುದರ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.



