ಮೈಸೂರು : ಹುಣಸೂರು ತಾಲ್ಲೂಕಿನಲ್ಲಿ ಸಾಕಷ್ಟು ಬಡಜನರ ಸೇವೆ ಮಾಡುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕೆಟ್ಟ ಹೆಸರು ತರಲು ಮತ್ತು ಜನಾನುರಾಗಿ ವೈದ್ಯರಾದ ಡಾ.ಲೋಹಿತ್ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಅವರು ಪರೋಕ್ಷವಾಗಿ ತಮ್ಮ ಬೆಂಬಲಿಗರ ಮೂಲಕ ಕಿರುಕುಳ ನೀಡುತ್ತಿದ್ದಾರೆಂದು ಹುಣಸೂರು ತಾಲ್ಲೂಕು ಕುರುಬರ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಮೂಕನಹಳ್ಳಿ ವಾಸೇಗೌಡ ಆರೋಪಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಐದು ವರ್ಷಗಳಿಂದ ಕಾವೇರಿ ಆಸ್ಪತ್ರೆ ಹುಣಸೂರು ತಾಲ್ಲೂಕಿನ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮವಾದ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿದೆ. ಆಸ್ಪತ್ರೆಯ ಮುಖ್ಯಸ್ಥರು ಮತ್ತು ವೈದ್ಯರಾದ ಡಾ.ಲೋಹಿತ್ ಅವರು ತಮ್ಮ ಸೇವೆಯ ಮೂಲಕ ಈ ಭಾಗದಲ್ಲಿ ಸಾಕಷ್ಟು ಜನಪ್ರಿಯರಾಗುತ್ತಿರುವುದನ್ನು ಸಹಿಸದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಒಂದು ವೇಳೆ ಡಾ.ಲೋಹಿತ್ ರಾಜಕೀಯಕ್ಕೆ ಬಂದರೆ ತಮಗೆ ಮುಳುವಾಗುತ್ತದೆ ಎಂದು ಭಾವಿಸಿ ತಮ್ಮ ಬೆಂಬಲಿಗರ ಮೂಲಕ ಆಸ್ಪತ್ರೆ ವಿರುದ್ಧ ದೂರು ಕೊಡುವುದು, ಪತ್ರಿಕಾಗೋಷ್ಠಿ ನಡೆಸಿ ಅಪಪ್ರಚಾರಕ್ಕೆ ತೊಡಗಿದ್ದಾರೆ.
ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಹುಣಸೂರು ನಗರಸಭೆಯಿಂದ ಲೈಸೆನ್ಸ್ ಪಡೆಯಲಾಗಿದೆ. ಆಸ್ಪತ್ರೆ ಪ್ರಾರಂಭಕ್ಕೆ ನಿಗದಿತ ಪ್ರಾಧಿಕಾರದಿಂದಲೂ ಅನುಮತಿ ಪಡೆಯಲಾಗಿದೆ. ಆದರೇ, ಇದೀಗ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಹುಣಸೂರು ತಾಲ್ಲೂಕಿನಲ್ಲಿ ಜನಪ್ರಿಯತೆ ಗಳಿಸುತ್ತಿದ್ದಂತೆ ನಗರಸಭೆ ಮೂಲಕ ನೋಟೀಸ್ ಕೊಡಿಸಲಾಗಿದೆ. ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಿದ್ದರೂ ಆಸ್ಪತ್ರೆ ವಿರುದ್ಧ ಅಪಪ್ರಚಾರ ಮಾಡಿಸುವುದು ಮುಂದುವರಿದಿದೆ ಎಂದು ಕಿಡಿಕಾರಿದರು.
ಹುಣಸೂರು ತಾಲ್ಲೂಕಿನಲ್ಲಿ ಕುರುಬ ಸಮುದಾಯ ಪ್ರಭಲವಾಗಿದೆ. ಈ ಸಮುದಾಯದ ಬೆಂಬಲದಿಂದಲೇ ಹೆಚ್.ಪಿ.ಮಂಜುನಾಥ್ ಮೂರು ಬಾರಿ ಶಾಸಕರಾಗಿದ್ದಾರೆ. ಇದೀಗ ಅದೇ ಸಮುದಾಯದ ಒಬ್ಬ ವೈದ್ಯರು ತಾಲ್ಲೂಕಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಮಾಜಿ ಶಾಸಕರು ಸಹಿಸುತ್ತಿಲ್ಲ, ಒಂದು ವೇಳೆ ಡಾ.ಲೋಹಿತ್ ಮುಂದೆ ವಿಧಾನಸಭೆಗೆ ಸ್ಪರ್ಧಿಸಬಹುದು. ಹಾಗಾದರೆ ತಮ್ಮ ರಾಜಕೀಯ ಅಸ್ತಿತ್ವದ ಗತಿ ಏನು ಎಂಬ ಭೀತಿ ಪ್ರಾರಂಭವಾಗಿದೆ. ಡಾ.ಲೋಹಿತ್ ಅವರಿಗೆ ಯಾವುದೇ ರೀತಿಯ ರಾಜಕೀಯ ಆಸಕ್ತಿ ಇಲ್ಲ, ಆದರೇ ಸಮುದಾಯ ಅವರ ಬೆಂಬಲಕ್ಕಿದೆ ಎಂದು ಗಣಪತಿ ಹೇಳಿದರು.
ಈ ಕಾರಣಕ್ಕಾಗಿ ಮಾಜಿ ಶಾಸಕರು ತಮ್ಮ ಬೆಂಬಲಿಗರ ಮೂಲಕ ಆಸ್ಪತ್ರೆಗೆ ಮತ್ತು ಡಾ.ಲೋಹಿತ್ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಕುರುಬ ಸಮುದಾಯದ ಶಕ್ತಿಯನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕುರುಬ ಸಮುದಾಯದ ಮುಖಂಡರಾದ ಹೆಚ್.ಡಿ.ಕೋಟೆ ಆರ್.ರವಿ ಮಾತನಾಡಿ, ಹುಣಸೂರಿನಲ್ಲಿ ೩೭ ಕೋಟಿ ವೆಚ್ಚದಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದೆ. ಆದರೇ, ಮಾಜಿ ಶಾಸಕರಾದ ಹೆಚ್.ಪಿ.ಮಂಜುನಾಥ್ ತಾವು ಮಾಜಿ ಆಗಿರುವ ಕಾರಣ ಕಟ್ಟಡದ ಉದ್ಘಾಟನಾ ಫಲಕದಲ್ಲಿ ತಮ್ಮ ಹೆಸರು ಇರುವುದಿಲ್ಲ ಎಂದು ಅವರು ಕಟ್ಟಡದ ಉದ್ಘಾಟನೆಯನ್ನೇ ಮಾಡಿಸಿಲ್ಲ, ಇದಕ್ಕೆ ತಡೆ ಒಡ್ಡಿದ್ದಾರೆ. ಮಂಜುನಾಥ್ ಅವರಿಗೆ ಶಕ್ತಿ ಇದ್ದರೆ ಹುಣಸೂರಿನಲ್ಲಿ ಇನ್ನೂ ಮೂರ್ನಾಲ್ಕು ಆಸ್ಪತ್ರೆಗಳನ್ನು ಪ್ರಾರಂಭಿಸಲಿ, ಕಾವೇರಿ ಆಸ್ಪತ್ರೆ ವಿರುದ್ಧವಾಗಿ ಅಪೋಲೋ ಆಸ್ಪತ್ರೆ ತಂದರು ಅದು ಮುಚ್ಚಿಹೋಯಿತು. ಇದೀಗ ಕಾವೇರಿ ಆಸ್ಪತ್ರೆಯನ್ನೆ ಮುಚ್ಚಲು ಹೊರಟಿರುವುದು ನ್ಯಾಯ ಸಮ್ಮತವಲ್ಲ, ಜನಪ್ರತಿನಿಧಿಗಳಿಗೆ ತಾಯಿ ಹೃದಯ ಇರಬೇಕು, ವೈಷಮ್ಯ ಸಾಧಿಸಬಾರದು. ತಮ್ಮ ೨೦ ವರ್ಷದ ರಾಜಕಾರಣದಲ್ಲಿ ತಾಲ್ಲೂಕಿನಲ್ಲಿ ಎಳ್ಳಷ್ಟು ಒಳ್ಳೆಯ ಕೆಲಸ ಮಾಡಿಲ್ಲ, ಕೇವಲ ಜಾತಿ ಜಾತಿಗಳ ನಡುವೆ ವಿಷ ಬಿತ್ತುವುದೇ ಆಗಿದೆ ಎಂದು ಅವರು ಕಿಡಿ ಕಾರಿದರು.
ಕುರುಬ ಸಮುದಾಯದ ಮುಖಂಡರಾದ ಕೆ.ಆರ್.ನಗರ ಕೃಷ್ಣೇಗೌಡ ಅವರು ಮಾತನಾಡಿ, ಕಾವೇರಿ ಆಸ್ಪತ್ರೆ ವಿರುದ್ಧ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಅವರು ನಡೆಸುತ್ತಿರುವ ಕುತಂತ್ರ ಇಲ್ಲಿಗೆ ನಿಲ್ಲಬೇಕು, ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಬೇಡಿ, ಕೊಟ್ಟರೆ ನಾವೇ ಸೋಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾವಿರಾರು ಜನರು ಒಟ್ಟಾಗಿ ಹೋಗಿ ಹೇಳುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಆರ್.ನಗರ ಕೃಷ್ಣೇಗೌಡ, ಕೆ.ಹೆಚ್.ಮಡೀಗೌಡ, ಶ್ರೀನಿವಾಸ, ದಾಸೇಗೌಡ, ಆರ್.ರವಿ, ಮುರಳೀಧರ ಇದ್ದರು.
ಯಾವುದೇ ಒಂದು ದೊಡ್ಡ ಕಟ್ಟಡವನ್ನು ಕಟ್ಟುವಾಗ ಸಣ್ಣ ಪುಟ್ಟ ವ್ಯತ್ಯಾಸಗಳಾಗುವುದು ಸಹಜ, ಅದನ್ನು ನ್ಯಾಯಾಲಯದ ಮೂಲಕ ಮತ್ತು ನಗರಸಭೆ ಮೂಲಕ ಸರಿಪಡಿಸಿಕೊಳ್ಳಲು ಅವಕಾಶವಿದೆ. ಇಂತಹ ವ್ಯತ್ಯಾಸಗಳು ಹುಣಸೂರು ಪಟ್ಟಣದಲ್ಲಿ ಸಾವಿರಾರು ಇವೆ. ಅವೆಲ್ಲವನ್ನೂ ಸರಿಪಡಿಸಿ ಎಂದು ನಾವು ಹೋರಾಟಕ್ಕೆ ಇಳಿದರೆ ಇಡೀ ಹುಣಸೂರು ಪಟ್ಟಣವನ್ನೇ ನೆಲಸಮ ಮಾಡಬೇಕಾಗುತ್ತದೆ. ನಮ್ಮ ಸಮುದಾಯ ಯಾರ ತಂಟೆಗೂ ಹೋಗದೆ ನಮ್ಮಷ್ಟಕ್ಕೆ ನಾವು ಇದ್ದರೂ ಕಿರುಕುಳ ನೀಡುವುದು ಮುಂದುವರಿದೆ. ಇದು ಹೀಗೆ ಮುಂದುವರಿದರೆ ನಾವೂ ಕೂಡ ಬೀದಿಗೆ ಬರಬೇಕಾಗುತ್ತದೆ.
-ಗಣಪತಿ, ತಾಪಂ ಮಾಜಿ ಸದಸ್ಯ