ಹೊಸದಿಲ್ಲಿ: ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಇಂದು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅವರ ಸಂಪೂರ್ಣ ಸಚಿವ ಸಂಪುಟ ರಾಜೀನಾಮೆ ನೀಡಿದೆ. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಆಡಳಿತ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ನಡುವೆ ಒಡಕು ಉಂಟಾಗಿದೆ ಎಂಬ ವದಂತಿಗಳ ನಡುವೆ ಈ ಬೆಳವಣಿಗೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಹಾಗೂ ದುಷ್ಯಂತ್ ಚೌಟಾಲ ಅವರ ಜೆಜೆಪಿ ಹೇಳಿಕೊಂಡಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರ್ಯಾಣದ ಎಲ್ಲಾ ೧೦ ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಮನೋಹರ್ ಲಾಲ್ ಖಟ್ಟರ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದೂ ತಿಳಿಯಲಾಗಿದೆ. ಖಟ್ಟರ್ ಅವರು ಪ್ರಸ್ತುತ ಬಿಜೆಪಿಯ ಸಂಜಯ್ ಭಾಟಿಯಾ ಸಂಸದರಾಗಿರುವ ಕರ್ನಾಲ್ ಕ್ಷೇತ್ರದಿಂದ ಸ್ಪರ್ಧಿಸಬಹುದೆಂದು ತಿಳಿಯಲಾಗಿದೆ. ಕೆಲ ಮೂಲಗಳ ಪ್ರಕಾರ ಸಂಜಯ್ ಭಾಟಿಯಾ ಅವರು ಸಿಎಂ ಆಗಲೂಬಹುದು ಎಂದು ಹೇಳಲಾಗುತ್ತಿದೆ.