Monday, January 12, 2026
Google search engine

Homeರಾಜಕೀಯಜನಾರ್ದನ ರೆಡ್ಡಿಯಿಂದ ಪಕ್ಷಕ್ಕೆ ಹಣ ಪಡೆಯಲು ಬಿಜೆಪಿ ತನ್ನ ನಿಲುವು ಬದಲಿಸಿಕೊಂಡಿದೆಯೇ? ; ಎಂ.ಬಿ.ಪಾಟೀಲ್‌ ವಾಗ್ದಾಳಿ

ಜನಾರ್ದನ ರೆಡ್ಡಿಯಿಂದ ಪಕ್ಷಕ್ಕೆ ಹಣ ಪಡೆಯಲು ಬಿಜೆಪಿ ತನ್ನ ನಿಲುವು ಬದಲಿಸಿಕೊಂಡಿದೆಯೇ? ; ಎಂ.ಬಿ.ಪಾಟೀಲ್‌ ವಾಗ್ದಾಳಿ

ಬೆಂಗಳೂರು : ಅಕ್ರಮ ಗಣಿಗಾರಿಕೆಯ ಮೂಲಕ ವಿಶ್ವದಲ್ಲೇ ಕುಖ್ಯಾತಿ ಗಳಿಸಿದಂತಹ ಲೂಟಿ ಮಾಡಿರುವ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಯವರು ಮೊದಲು ಹೊರ ಹಾಕಿದ್ದರು. ಈಗ ಅವರ ಜೊತೆಯಲ್ಲೇ ಕೈಜೋಡಿಸಿದ್ದಾರೆ. ಇದು ಏಕೆ ? ಜನಾರ್ದನ ರೆಡ್ಡಿ ಬಳಿ ಇರುವ ದುಡ್ಡಿಗಾಗಿಯೇ? ಅಥವಾ ಅಕ್ರಮ ಗಣಿಗಾರಿಕೆಯ ಪಾಲುದಾರಿಕೆಗಾಗಿಯೇ? ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅಕ್ರಮ ಗಣಿಗಾರಿಕೆ ತೀವ್ರವಾಗಿದ್ದಾಗ ಅದನ್ನು ವಿರೋಧಿಸಿ ಕಾಂಗ್ರೆಸ್‌‍ ಪಕ್ಷ ಬೆಂಗಳೂರಿನಿಂದ ಬಳ್ಳಾರಿಯವರೆಗೂ ಪಾದಯಾತ್ರೆ ಮಾಡಿತ್ತು. ಈಗ ಬಿಜೆಪಿ ಯಾವ ಕಾರಣಕ್ಕೆ ಪಾದಯಾತ್ರೆ ಮಾಡುತ್ತಿದೆ. ಬಳ್ಳಾರಿ ಬ್ಯಾನರ್‌ ಗಲಾಟೆ ಇಬ್ಬರು ವ್ಯಕ್ತಿಗಳ ನಡುವಿನ ಜಗಳ. ಅದಕ್ಕಾಗಿ ಪಾದಯಾತ್ರೆ ಮಾಡುವುದು ಉಚಿತವೇ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಜನಾರ್ದನ ರೆಡ್ಡಿ ಸಚಿವರಾಗಿದ್ದಾಗ ತಮ್ಮ ದುರಾಸೆಗಾಗಿ ರಿಪಬ್ಲಿಕ್‌ ಆಫ್‌ ಬಳ್ಳಾರಿ ಮಾಡಿಕೊಂಡಿದ್ದರು. ರಾಜ್ಯದ ಗಡಿಯನ್ನೇ ಧ್ವಂಸ ಮಾಡಿ ಅಕ್ರಮ ಗಣಿಗಾರಿಕೆ ಮಾಡಿದ್ದರು. ದೇವಸ್ಥಾನ ಸ್ಫೋಟಿಸಿದ್ದರು. ಗಣಿಗಾರಿಕೆ ನಡೆಸುವವರಿಂದ ಪಾಲು ಪಡೆಯುತ್ತಿದ್ದರು. ಅರಣ್ಯದಲ್ಲೂ ಗಣಿಗಾರಿಕೆ ಮಾಡಿದ ಅರೋಪಕ್ಕೆ ಗುರಿಯಾಗಿದ್ದರು. ಇದು ವಿಶ್ವವಿಖ್ಯಾತವಾದಂತಹ ಲೂಟಿ ಎಂದು ಗುರುತಿಸಿಕೊಂಡಿತ್ತು ಎಂದು ಆರೋಪಿಸಿದ್ದಾರೆ.

ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಬೆಂಬಲಿಗರು ಆಕ್ರಮ ಗಣಿಗಾರಿಕೆ ಮಾಡಿದ್ದಕ್ಕಾಗಿ ಬಿಜೆಪಿ ಅವರನ್ನು ಹೊರ ಹಾಕಿತ್ತು. ಈಗ ಜನಾರ್ದನ ರೆಡ್ಡಿಯ ಬೆಂಬಲಕ್ಕೆ ಬಿಜೆಪಿ ನಾಯಕರು ನಿಲ್ಲುತ್ತಿದ್ದಾರೆ. ಇದರ ಗೂಡಾರ್ಥ ಜನರಿಗೆ ಅರ್ಥವಾಗುತ್ತದೆ. ಜನಾರ್ದನ ರೆಡ್ಡಿಯಿಂದ ಪಕ್ಷಕ್ಕೆ ಹಣ ಪಡೆಯಲು ಅಥವಾ ಅಕ್ರಮ ಗಣಿಗಾರಿಕೆಯಲ್ಲಿ ಪಾಲು ಪಡೆಯಲಿಕ್ಕಾಗಿ ಬಿಜೆಪಿ ತನ್ನ ನಿಲುವು ಬದಲಿಸಿಕೊಂಡಿದೆಯೇ? ಎಂದು ಎಂ.ಬಿ.ಪಾಟೀಲ್‌ ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಹಾತ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಬಹಿರಂಗ ಚರ್ಚೆಗೆ ಬರಲಿ. ಯಾವುದಾದರೂ ಸಭಾಂಗಣದಲ್ಲಿ ಮಾಧ್ಯಮದವರ ಸಮ್ಮುಖದಲ್ಲಿಯೇ ಚರ್ಚೆ ನಡೆಯಲಿ. ನಾನು ಪ್ರಿಯಾಂಕ್‌ ಖರ್ಗೆ ಅವರನ್ನು ಚರ್ಚೆಗೆ ಒಪ್ಪಿಸುತ್ತೇನೆ. ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲು ಸಿದ್ದರಿದ್ದಾರೆಯೇ ? ಎಂದು ಎಂ.ಬಿ.ಪಾಟೀಲ್‌ ಸವಾಲು ಹಾಕಿದ್ದಾರೆ.

RELATED ARTICLES
- Advertisment -
Google search engine

Most Popular