ಗದಗ: ಪ್ರಧಾನಿಗೆ ದೂರು ನೀಡುವ ಎಚ್ ಡಿಕೆ ಹೇಳಿಕೆಗೆ ಸಚಿವ ಎಚ್ ಕೆ ಪಾಟೀಲ ಪ್ರತಿಕ್ರಿಯೆ ನೀಡಿದ್ದು, ಅವರ ಬಳಿ ಯಾಕೆ ತೆಗೆದುಕೊಂಡು ಹೋಗ್ತೀರಿ.. ಏನ್ ಹೇಳ್ಬೇಕೊ ಜನರಿಗೆ ಹೇಳಬಹುದಿತ್ತು ಎಂದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ಕುಮಾರಸ್ವಾಮಿಗಳಿಗೆ ಸಮೀಪವಾಗಿದ್ದಾರಾ..? ಕುಮಾರಸ್ವಾಮಿಯವರೇ ನಿಮ್ಮ ಕೈಯಲ್ಲೇ ವಿಧಾನಸಭೆ ಇತ್ತಲ್ಲ..! ಮತ್ತೇಕೆ ಪ್ರಧಾನಮಂತ್ರಿ ಮೋದಿಯವರೆಗೆ ಹೋಗ್ತೀರಿ. ಅಂತಿಮವಾಗಿ ಜನರ ಬಳಿ ಹೋಗ್ಬೇಕು ಎಂದಿದ್ದಾರೆ.
ವಿಧಾನಸಭೆಯಲ್ಲಿ ಏನೂ ಹೇಳಲಿಲ್ಲ.. ನಿಮಗಾಗಿ ರಾಜ್ಯಪಾಲರು ಭಾಷಣದ ನಂತರ ಮಾತನಾಡುವುದಕ್ಕೆ ಅವಕಾಶ ಇತ್ತು.. ವಿಶೇಷ ನಿಯಮವಾಳಿಗಳ ಪ್ರಕಾರ ಮಾತನಾಡಬೇಕಿತ್ತು. ಬಜೆಟ್ ನಂತ್ರ ಮಾತನಾಡಬಹುದಿತ್ತು. ಆಯ್ತು ಹೋಗ್ಬೇಕು ಅನ್ಕೊಂಡಿದಾರೆ.. ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಅನರ್ಹತೆ ರದ್ದು ವಿಚಾರವಾಗಿ ಪ್ರತಿಕ್ರಿಯಿಸಿ, ಸದಸ್ಯತ್ವ ರದ್ದಾದಾಗ ಹಗಲು ರಾತ್ರಿ ಕೆಲಸ ಮಾಡಿದ್ರು. ಸದ್ಯತ್ವ ಪುನಸ್ಥಾಪಿತವಾದಾಗ 24 ಗಂಟೆಯಲ್ಲಿ ಆಗ್ಬೇಕಿತ್ತು. ವಿಳಂಬಮಾಡಿದ ಪ್ರತಿ ನಿಮಿಷದ ಬಗ್ಗೆ ಸಚಿವಾಲಯ ಉತ್ತರಿಸಬೇಕು. ರಜೆಯಾಗಿದ್ರೆ ಏನಾಯ್ತು.. ಆದೇಶ ಮಾಡಲು ಬರುತ್ತಿರಲಿಲ್ಲವೇ..? ಸುಪ್ರೀಂ ಕೋರ್ಟ್ ಮಂಗಳಾರತಿ ಮಾಡಿದ್ಮೇಲೂ ಎಚ್ಚರವಾಗಬಾರದಾ..?ಶನಿವಾರ ಏನಾಗಿತ್ತು.. ಇವತ್ತು ಮುಹೂರ್ತ ನೋಡಿದ್ರಾ..? ಸುಪ್ರೀಂ ಕೋರ್ಟ್ ಕೊಟ್ಟ ನ್ಯಾಯ ನಿಮಗೆ ತಕ್ಷಣಕ್ಕೆ ಜಾರಿ ಮಾಡಲು ಆಗ್ಲಿಲ್ವಾ..? ಎಂದು ಕಿಡಿಕಾರಿದರು.
ನ್ಯಾಯಾಂಗಕ್ಕೆ ಅನ್ಯಾಯ ತಡೆಯುವ ಶಕ್ತಿ ಇದೆ ಅಂತಾ ಮತ್ತೊಮ್ಮೆ ಸಾಬೀತಾಗಿದೆ ಎಂದು ತಿಳಿಸಿದರು.