ಯಾದಗಿರಿ : ಭೀಮಾತೀರದ ಪ್ರವಾಹ ಮಿತಿಮೀರಿದ್ದು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಮಳೆಯ ನರ್ತನಕ್ಕೆ ಬೆಳೆಗಳು ಸರ್ವನಾಶವಾಗಿದ್ದು, ರೈತರು ದಿಕ್ಕುತೋಚದಂತಾಗಿದೆ.
ಭೀಮಾನದಿ ಪ್ರವಾಹಕ್ಕೆ ಯಾದಗಿರಿಗೆ ಜಲಕಂಟಕ ಎದುರಾಗಿದೆ. ನದಿ ಪಾತ್ರದ ಜನರಂತೂ ತತ್ತರಿಸಿಹೋಗಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನಗರದ ವೀರಭದ್ರೇಶ್ವರ ನಗರ, ವಿಶ್ವರಾಧ್ಯನಗರ ಬಡಾವಣೆಗಳಿಗೆ ರಾತ್ರಿ ನೀರು ನುಗ್ಗಿದ್ದು ನಿವಾಸಿಗಳಿಗೆ ಜಲಕಂಟಕ ಎದುರಾಗಿದೆ. ಮನೆಯಲ್ಲಿ ಸಿಲುಕಿದ ಜನರನ್ನ SDRF ಹಾಗೂ ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ. 20ಕ್ಕೂ ಹೆಚ್ಚು ಜನರನ್ನ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಜಿಲ್ಲೆಯ ಹಲವೆಡೆ ಗ್ರಾಮಗಳು ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದು ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಇನ್ನು,ಮಹಾರಾಷ್ಟ್ರದಲ್ಲಿ ಮಳೆ ಎಫೆಕ್ಟ್ ಹಿನ್ನೆಲೆ ಜಯಪುರದಲ್ಲಿ ಭೀಮಾನದಿ ಪ್ರವಾಹ ಉಂಟಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಮಧ್ಯದಲ್ಲೇ ಲಾಕ್ ಆಗಿದ್ದಾರೆ.
ನೀರಿದ್ದ ಕಾರಣ ಸೇತುವೆ ಮೇಲೆ ವಾಹನ ಕೆಟ್ಟು ಅಧಿಕಾರಿಗಳು ಸಮಸ್ಯೆ ಅನುಭವಿಸಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿಗಳು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಿಂದ ಭೀಮಾ ನದಿ ಪಾತ್ರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ವೆಹಿಕಲ್ ಕೈ ಕೊಟ್ಟ ಕಾರಣ ನೀರಿನಲ್ಲೇ ನಡೆದುಕೊಂಡು ಅಧಿಕಾರಿಗಳು ಸಾಗಿದ್ದಾರೆ.
ಇನ್ನು,ಮಹಾರಾಷ್ಟ್ರ ದಲ್ಲಿ ಭಾರಿ ಮಳೆ ಆಗ್ತಿದ್ದು, ಕಲಬುರಗಿಯಲ್ಲಿ ಪ್ರವಾಹಕ್ಕೆ ಜನರು ಕಂಗಾಲಾಗಿದ್ದಾರೆ. ಈ ನಡುವೆ ಮನ ಕಲಕುವ ದೃಶ್ಯವೊಂದು ಎಲ್ಲೆಡೆ ವೈರಲ್ ಆಗಿದೆ. ಒಂದು ತಿಂಗಳ ಹಸೂಗೂಸನ್ನು ಕಂಕುಳಲ್ಲಿ ಇಟ್ಟುಕೊಂಡು ಮನೆಯ ಮೇಲ್ಚಾವಣಿ ಬಾಣಂತಿ ಏರಿಕುಳಿತಿದ್ದಾಳೆ. ಬಾಣಂತಿಯ ವಿಡಿಯೋ ದೊಡ್ಡ ಸದ್ದು ಮಾಡುತ್ತಿದೆ.ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಸಮಖೇಡ ತಾಂಡಾದಲ್ಲಿ ಘಟನೆ ನಡೆದಿದೆ.
ಭಾರಿ ವರ್ಷಧಾರೆಗೆ ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು ಸಮಖೇಡ ತಾಂಡಾ ಸಂಪೂರ್ಣ ಜಲಾವೃತವಾಗಿದೆ. ಗ್ರಾಮದ ಶೋಭಾ ಎಂಬ ಬಾಣಂತಿ ಹಸೂಗೂಸನ್ನು ಕಟ್ಟಿಕೊಂಡು ಮನೆಯ ಮೇಲ್ಚಾವಣಿಯಲ್ಲಿ ಪರದಾಡಿದ್ದಾಳೆ. ಹಸುಗೂಸು ಹಾಗೂ ತಾಯಿ ಶೋಭಾ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಗ್ರಾಮಕ್ಕೆ ಗ್ರಾಮವೇ ಮುಳುಗಿ ಹೋಗಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ.
ಇದು ಈ ಭಾಗದ ಜನರನ್ನು ರೊಚ್ಚಿಗೇಳಿಸಿದೆ. ಭೀಮಾ ನದಿಯ ಪ್ರವಾಹದಿಂದ ನದಿ ದಡದ ಹಲವು ಗ್ರಾಮಗಳಿಗೆ ಕಂಟಕ ಎದುರಾಗಿದೆ. ನೂರಾರು ಏಕರೆಯಲ್ಲಿ ಬೆಳೆದಿದ್ದ ಬೆಳೆ ಸರ್ವನಾಶವಾಗಿದೆ.
ಕಾಗಿಣಾ ನದಿಯ ಇಬ್ಬರ ತಾಂಡಾದ 100 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಮನೆ ಸಾಮಗ್ರಿಗಳೆಲ್ಲ ನದಿಯ ಪಾಲಾಗಿದ್ದವು. ಹೀಗಾಗಿ ಜೀವ ಉಳಿಸಿಕೊಳ್ಳಲು ಶೋಭಾ ಹಸೂಗೂಸನ್ನ ಕಂಕುಳಲ್ಲಿ ಇಟ್ಟುಕೊಂಡು ಮೇಲ್ಚಾವಣಿ ಏರಿದ್ದಾರೆ.
ಇನ್ನು, ತಾಂಡಾ ನಿವಾಸಿಗಳು ಧಿಡೀರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಳಕ್ಕೆ ಧಾವಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಗ್ರಾಮಸ್ಥರ ಮನವೊಲಿಸಿದ್ದಾರೆ.