ಕೋಲ್ಕತ್ತಾ : ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅನಿರೀಕ್ಷಿತ ಗೆಲುವು ಸಾಧಿಸಿದೆ. ಸೋಲಿನ ಸುಳಿಯಲ್ಲಿದ್ದ ಲಕ್ನೋ ತಂಡಕ್ಕೆ ಮುಕುಲ್ ಚೌಧರಿ ಅವರ ಅಜೇಯ ಅರ್ಧಶತಕದ ಬ್ಯಾಟಿಂಗ್ ಸಂಜೀವಿನಿಯಾಯಿತು.
ಪಂದ್ಯದ ಮುಖ್ಯಾಂಶಗಳು ಹೀಗಿದೆ :
ಕೆಕೆಆರ್ ಬ್ಯಾಟಿಂಗ್ : ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 181 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು.
ಲಕ್ನೋ ಸಂಕಷ್ಟ : ಗುರಿ ಬೆನ್ನಟ್ಟಿದ ಲಕ್ನೋ ಒಂದು ಹಂತದಲ್ಲಿ 128 ರನ್ನಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ನಿರ್ಣಾಯಕ ಜೊತೆಯಾಟ : ಮುಕುಲ್ ಚೌಧರಿ ಮತ್ತು ಆವೇಶ್ ಖಾನ್ ನಡುವೆ ಮೂಡಿಬಂದ 54 ರನ್ಗಳ ಜೊತೆಯಾಟ ಪಂದ್ಯದ ಗತಿಯನ್ನೇ ಬದಲಿಸಿತು. ವಿಶೇಷವೆಂದರೆ, ಈ ಜೊತೆಯಾಟದಲ್ಲಿ ಆವೇಶ್ ಖಾನ್ ನೀಡಿದ್ದು ಕೇವಲ 1 ರನ್ ಮಾತ್ರ.
ಅಜಿಂಕ್ಯ ರಹಾನೆ ಮೆಚ್ಚುಗೆ
ಸೋಲಿನ ಬಳಿಕ ಮಾತನಾಡಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, “ಈ ಸೋಲನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಆದರೆ ಮುಕುಲ್ ಆಟ ಅದ್ಭುತವಾಗಿತ್ತು. 180-185 ರನ್ ಈ ಪಿಚ್ನಲ್ಲಿ ಉತ್ತಮ ಮೊತ್ತವೇ ಆಗಿತ್ತು, ಆದರೆ ಮುಕುಲ್ ಅವರ ಬ್ಯಾಟಿಂಗ್ ಶ್ರೇಯಸ್ಸು ಅವರಿಗೆ ಸಲ್ಲಬೇಕು,” ಎಂದು ಎದುರಾಳಿ ಆಟಗಾರನನ್ನು ಶ್ಲಾಘಿಸಿದರು.
ತಂದೆಯ ಕನಸು ನನಸು ಮಾಡಿದ ಮುಕುಲ್
ಗೆಲುವಿನ ಬಳಿಕ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಮುಕುಲ್ ಚೌಧರಿ, “ನನ್ನ ತಂದೆಯ ಮದುವೆಗೂ ಮುನ್ನವೇ ಅವರ ಮಗ ಕ್ರಿಕೆಟರ್ ಆಗಬೇಕೆಂಬ ಕನಸು ಕಂಡಿದ್ದರು. ಆರಂಭದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿರದಿದ್ದರೂ, ಜೈಪುರ ಮತ್ತು ಗುರ್ ಗಾಂವ್ಗೆ ತೆರಳಿ ಕಠಿಣ ತರಬೇತಿ ಪಡೆದೆ,” ಎಂದು ಭಾವುಕರಾಗಿ ನುಡಿದರು.
ರಾಜಸ್ಥಾನದ ಜುಂಜುನು ಮೂಲದ ಈ ಯುವ ಪ್ರತಿಭೆ ಈಗ ಐಪಿಎಲ್ ಅಂಗಳದಲ್ಲಿ ಮಿಂಚುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ



