ಬೆಂಗಳೂರು: ವ್ಹೀಲಿಂಗ್ ಅಥವಾ ಬೈಕ್ ಮೇಲೇರಿ ಚಕ್ರ ಎತ್ತುವಂತೆ ಚಾಲನೆ ಮಾಡುವ ಅಪಾಯಕಾರಿ ಕ್ರಿಯೆಗಳು ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ, ಇಂಥ ಚಟುವಟಿಕೆಗಳ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತು ಗಂಗಾವತಿಯ ಅರ್ಬಾಜ್ ಖಾನ್ ಅಲಿಯಾಸ್ ಅರ್ಬಾಜ್ (29) ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಏಕಸದಸ್ಯ ಪೀಠ, ಈ ಕ್ರಮಗಳನ್ನು ಸೂಚಿಸಿದೆ. ಅರ್ಬಾಜ್ ಅವರು ಮೊದಲು ಕೂಡ ವ್ಹೀಲಿಂಗ್‌ನಲ್ಲಿ ತೊಡಗಿದ್ದಿದ್ದು, ಅದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ ಎಂಬುದು ಪೀಠದ ಗಮನಕ್ಕೆ ಬಂದಿದೆ.
ಅಕ್ಟೋಬರ್ 9, 2024 ರಂದು ಗಂಗಾವತಿಯ ಹೇಮಗುಡ್ಡ ದುರ್ಗಮ್ಮ ದೇವಸ್ಥಾನದ ದಸರಾ ಉತ್ಸವದ ವೇಳೆ ಅರ್ಬಾಜ್ ಸೇರಿದಂತೆ ಮೂವರು ಯುವಕರು ಯಮಹಾ ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದಾಗ ಅವರನ್ನು ಹಿಡಿಯಲು ಯತ್ನಿಸಿದ ಪೊಲೀಸರ ಮೇಲೆ ದಾಳಿ ನಡೆಸಿ, ಅವರ ಮೊಬೈಲ್ ಕಸಿದು ನದಿಗೆ ಎಸೆದಿದ್ದಾರೆ ಎಂಬ ಗಂಭೀರ ಆರೋಪವಿದೆ.
ನ್ಯಾಯಪೀಠವು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ – 2023 ಮತ್ತು ಮೋಟಾರು ವಾಹನ ಕಾಯ್ದೆ – 1988ರಲ್ಲಿ ತಿದ್ದುಪಡಿ ಮಾಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದ್ದು, ಯುವಕರು ವ್ಹೀಲಿಂಗ್‌ನಂತಹ ಅಪಾಯಕಾರಿ ಸಾಹಸಗಳಲ್ಲಿ ತೊಡಗುವುದು ಸಮಾಜದ ನೆಮ್ಮದಿ ಮತ್ತು ಸುರಕ್ಷೆಗೆ ಭಂಗ ಉಂಟುಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ವ್ಹೀಲಿಂಗ್ ಈಗ ನಗರವ್ಯಾಪ್ತಿಯಿಂದ ಹೊರಬಿದ್ದು ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿದ್ದು, ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೈಕೋರ್ಟ್ ಉಲ್ಲೇಖಿಸಿದೆ.