ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ ನಾಮಪತ್ರಗಳಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದದ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರದವರೆಗೆ ಪ್ರಕಟಿಸಬಾರದೆಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ ತನ್ನ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ಪತ್ರಿಕೋದ್ಯಮಿ ಎನ್. ಶಾಂತಕುಮಾರ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ, ನಾಮಪತ್ರ ಹಿಂಪಡೆದವರನ್ನೂ ವಿಚಾರಣಾ ಪ್ರಕ್ರಿಯೆಯಲ್ಲಿ ಒಳಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಮಾಜಿ ಕ್ರಿಕೆಟಿಗ ವೆಂಕಿ ಬಣದ ಕಲ್ಪನಾ ವೆಂಕಟಾಚಾರ್ ಕೂಡ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೂ, ನಂತರ ಹಿಂಪಡೆದಿದ್ದಾರೆ. ಹೈಕೋರ್ಟ್ ಇಬ್ಬರಿಗೂ ನೋಟಿಸ್ ಜಾರಿ ಮಾಡಿದೆ. ನವೆಂಬರ್ 27 ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದ್ದು, ಶಾಂತಕುಮಾರ್ ಅವರ ನಾಮಪತ್ರ ತಿರಸ್ಕಾರದ ಪರಿಣಾಮ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಕೆಎಸ್‌ಸಿಎ ಯಾವುದೇ ಅಧಿಕೃತ ಪ್ರಕಟಣೆ ನೀಡಿರಲಿಲ್ಲ.
ಶಾಂತಕುಮಾರ್ ಪ್ರತಿನಿಧಿಸುವ ಕ್ರಿಕೆಟ್ ಕ್ಲಬ್ 200 ರೂ. ಸಬ್ಸ್ಕ್ರಿಪ್ಷನ್ ಶುಲ್ಕ ಪಾವತಿಸದ ಕಾರಣಕ್ಕೆ ಅವರ ನಾಮಪತ್ರ ತಿರಸ್ಕೃತವಾಗಿದ್ದು, ವೆಂಕಿ ಬಣದ ವಿನಯ್ ಮೃತ್ಯುಂಜಯ ಅವರ ನಾಮಪತ್ರವೂ ತಾಂತ್ರಿಕ ಕಾರಣಗಳಿಂದ ತಿರಸ್ಕೃತವಾಗಿದೆ.



