Friday, July 10, 2026
Google search engine

Homeರಾಜ್ಯಉನ್ನತ ಮಟ್ಟದ ಮೈಸೂರು ದಸರಾ ಸಿದ್ಧತಾ ಸಭೆ: ದಸರಾ ಪಾಸ್‌ಗಳು ಬೇಡ ಎಂದ ಸಂಸದ ಯದುವೀರ್

ಉನ್ನತ ಮಟ್ಟದ ಮೈಸೂರು ದಸರಾ ಸಿದ್ಧತಾ ಸಭೆ: ದಸರಾ ಪಾಸ್‌ಗಳು ಬೇಡ ಎಂದ ಸಂಸದ ಯದುವೀರ್

  • ಜನಸಾಮಾನ್ಯರಿಗೆ ಪಾರದರ್ಶಕ ಪ್ರವೇಶಕ್ಕೆ ಒತ್ತಾಯ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಮೈಸೂರು ದಸರಾ ಸಿದ್ಧತಾ ಸಭೆಯಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿ, ದಸರಾ ಆಯೋಜನೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಸಲಹೆಗಳನ್ನು ಸರ್ಕಾರದ ಮುಂದಿಟ್ಟರು. ಇದೇ ವೇಳೆ ಸಂಸದರಿಗೆ ನೀಡಲಾಗುವ ಯಾವುದೇ ರೀತಿಯ ಉಚಿತ ಅಥವಾ ವಿಶೇಷ ದಸರಾ ಪಾಸ್‌ಗಳನ್ನು ತಾವು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದರು.

ದಸರಾ ಮಹೋತ್ಸವ ಕೆಲವೇ ವ್ಯಕ್ತಿಗಳಿಗಾಗಿಯಲ್ಲ, ಅದು ಪ್ರತಿಯೊಬ್ಬ ಕನ್ನಡಿಗನ ಹಾಗೂ ದೇಶದ ಪ್ರತಿಯೊಬ್ಬ ನಾಗರಿಕನ ಹಬ್ಬವಾಗಿದ್ದು, ಪ್ರಮುಖ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಪ್ರವೇಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ದಸರಾ ಪಾಸ್‌ಗಳ ವಿತರಣೆಯಲ್ಲಿ ಆಯ್ದ ಕೆಲವರಿಗೆ ಮಾತ್ರ ಅವಕಾಶ ನೀಡುವ ಬದಲು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು, ಪ್ರವಾಸಿಗರು ಹಾಗೂ ಸಾಮಾನ್ಯ ನಾಗರಿಕರಿಗೆ ಸಮಾನ ಅವಕಾಶ ಸಿಗುವಂತೆ ವ್ಯವಸ್ಥೆ ರೂಪಿಸಬೇಕೆಂದು ಸಲಹೆ ನೀಡಿದರು.

ಆನ್‌ಲೈನ್ ಅರ್ಜಿ ಹಾಗೂ ಪಾರದರ್ಶಕ ಹಂಚಿಕೆ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಕೋರಿದ ಅವರು, ಇದರಿಂದ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚುವುದರ ಜೊತೆಗೆ ದಸರಾ ನಿಜವಾದ ಜನೋತ್ಸವವಾಗಿ ಮತ್ತಷ್ಟು ಅರ್ಥಪೂರ್ಣವಾಗಲಿದೆ ಎಂದರು. ತಮಗೆ ದೊರೆಯುವ ಸಂಸದರ ಕೋಟಾದ ಪಾಸ್‌ಗಳನ್ನೂ ಸಾರ್ವಜನಿಕರಿಗೆ ಪಾರದರ್ಶಕವಾಗಿ ಹಂಚಿಕೆ ಮಾಡುವಂತೆ ಸರ್ಕಾರವನ್ನು ವಿನಂತಿಸಿದರು.

ಅರಮನೆ ಆವರಣದಲ್ಲಿನ ಆನೆ ಶಿಬಿರದ ಬಳಿ ಪ್ರತಿದಿನ ಸಾವಿರಾರು ಜನ ಸೇರುವ ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಣಕ್ಕೆ ಪರಿಣಾಮಕಾರಿ ವ್ಯವಸ್ಥೆ ರೂಪಿಸಬೇಕು. ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಭದ್ರತೆಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ದಸರಾ ಕಂಬಳ ಆಯೋಜನೆ ಕುರಿತು ಸಮಗ್ರ ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂದ ಅವರು, ಪರಂಪರೆ, ಸ್ಥಳೀಯರ ಅಭಿಪ್ರಾಯ ಹಾಗೂ ಸಾರ್ವಜನಿಕರ ಸುರಕ್ಷತೆ ಎಲ್ಲವನ್ನೂ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಕೋರಿದರು.

ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುವುದರಿಂದ ಕಾನೂನು ಸುವ್ಯವಸ್ಥೆ, ಸಂಚಾರ ವ್ಯವಸ್ಥೆ, ಮಹಿಳೆಯರು ಮತ್ತು ಮಕ್ಕಳ ಭದ್ರತೆ, ತುರ್ತು ಸೇವೆಗಳು ಹಾಗೂ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಮರ್ಪಕವಾಗಿ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

“ಮೈಸೂರು ದಸರಾ ಕೆಲವೇ ಜನರ ಹಬ್ಬವಲ್ಲ, ಅದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ. ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತೆ ಪಾಸ್ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು” ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

RELATED ARTICLES
- Advertisment -
Google search engine

Most Popular