ಯಳಂದೂರು: ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದಲ್ಲಿರುವ ಪ್ರಸಿದ್ಧ ಸಪ್ತಮಾತೃಕೆ ಸಮೇತ ಹಿಂಡಿಮಾರಮ್ಮ ದೇಗುಲದಲ್ಲಿ ಭಾನುವಾರ ನಡೆದ ೨೦ ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಮಾರಂಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ವಿವಾಹ ನೋಂದಣಿ ಮಾಡಿಕೊಂಡಿದ್ದ ೧೭ ಮಂದಿ ಸಪ್ತಪದಿಯನ್ನು ತುಳಿಯುವ ಮೂಲಕ ವೈವಾಹಿಕ ಜೀವನಕ್ಕೆ ಮುಂದಡಿ ಇಟ್ಟರು. ತಾಲೂಕಿನ ಮಾಂಬಳ್ಳಿ, ಅಗರ, ಕಟ್ನವಾಡಿ, ಕಿನಕಹಳ್ಳಿ, ಬನ್ನಿಸಾರಿಗೆ, ಬಸಾಪುರ, ಚಿಕ್ಕುಪ್ಪಾರಬೀದಿ ಎಂಬ ೭ ಗ್ರಾಮಗಳಿಗೆ ಈ ದೇಗುಲ ಸೇರುತ್ತದೆ. ಇಲ್ಲಿಗೆ ವಿದೇಶದಲ್ಲೂ ಅನೇಕ ಭಕ್ತರಿದ್ದಾರೆ. ದೇಗುಲದ ಆವರಣದಲ್ಲಿ ಮಂತ್ರಘೋಷಗಳೊಂದಿಗೆ ಇಲ್ಲಿ ನೆರೆದಿದ್ದ ಜೋಡಿಗಳಿಗೆ ಉಚಿತವಾಗಿ ತಾಳಿ, ಕಾಲುಂಗುರ, ಸೀರೆ, ಪಂಚೆಯನ್ನು ಕೊಟ್ಟು ಶಾಸ್ತ್ರೋಕ್ತವಾಗಿ ವಿವಾಹ ಮಾಡಿ ಇಲ್ಲಿ ನೆರೆದಿದ್ದ ದಂಪತಿಗಳ ಸಂಬಂಧಿಕರು ಹಾಗೂ ಭಕ್ತ ಸಮೂಹ ಧಾರೆ ಎರೆಯುವ ಮೂಲಕ ನೂತನ ಜೋಡಿಗಳನ್ನು ಆಶೀರ್ವದಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹತ್ತಾರು ಗಣ್ಯರು ಭಾಗವಹಿಸಿದ್ದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಗುಲದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಇಂತಹ ಮನೋವೃತ್ತಿಯನ್ನು ದೇಗುಲದ ಆಡಳಿತ ಮಂಡಳಿ ತಳೆದಿರುವುದು ಇತರರಿಗೆ ಮಾದರಿಯಾಗಿದೆ. ಮಾಂಬಳ್ಳಿ ಗ್ರಾಮ ಅನೇಕ ರಾಜಕೀಯ ಮುತ್ಸದ್ಧಿಗಳು, ಅತ್ಯುನ್ನತ ದರ್ಜೆಯ ಅಧಿಕಾರಿಗಳನ್ನು ನಾಡಿಗೆ ಕೊಡುಗೆ ನೀಡಿದ ಗ್ರಾಮವಾಗಿದೆ. ಅವರೂ ಕೂಡ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿರುವುದು ಉತ್ತಮ ಕೆಲಸವಾಗಿದ್ದು ಈ ಪರಂಪರೆ ಇನ್ನೂ ಮುಂದುವರೆಯಬೇಕು ಎಂದು ಆಶಿಸಿದರು.
ಮಾಜಿ ಸಚಿವ ಬಿ. ಸೋಮಶೇಖರ್ ಮಾತನಾಡಿ, ದೇವರಿಗೆ ಪೂಜೆ ಸಲ್ಲಿಸುವ ಜೊತೆಗೆ ನಮ್ಮ ನಡವಳಿಕೆಯಲ್ಲೂ ನಾವು ಭಕ್ತಿ ರೂಪಿಸಿಕೊಳ್ಳಬೇಕು. ಈ ಗ್ರಾಮದಲ್ಲಿರುವ ಈ ದೇಗುಲ ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು ತುಂಬ ಶಕ್ತಿಶಾಲಿ ದೇವರಾಗಿದ್ದು ಇಲ್ಲಿನ ಆಡಳಿತ ಮಂಡಲಿ ಇಂತಹ ಜನಪರವಾದ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಸನಾರ್ಹವಾಗಿದೆ ಎಂದರು. ಮಾಜಿ ಸಂಸದ ಎಂ. ಶಿವಣ್ಣ ಶಾಸಕರಾದ ಎಸ್. ಜಯಣ್ಣ, ಎನ್. ಮಹೇಶ್, ಜಿ.ಎನ್. ನಂಜುಂಡಸ್ವಾಮಿ ಡಾ. ಬಿ. ಜಯಶ್ರೀ ಮಹದೇವು ಡಾ.ಆರ್. ನೀಲಕಂಠಸ್ವಾಮಿ ಮಾತನಾಡಿದರು. ನಾಡಗೌಡರಾದ ಎಂ.ಸಿ. ರಮೇಶ್, ಬಿ. ಪುಟ್ಟಸುಬ್ಬಣ್ಣ, ಎನ್. ರವಿಕುಮಾರ್, ಪಿ. ಮಹದೇವಸ್ವಾಮಿ, ಮಾಂಬಳ್ಳಿ ನಂಜುಂಡಸ್ವಾಮಿ, ಅಗರವೆಂಕಟೇಶ್, ಕಿನಕಹಳ್ಳಿ ಸಿದ್ಧರಾಜು, ಎಂ.ಆರ್. ರವಿ ಸೇರಿದಂತೆ ೭ ಗ್ರಾಮಗಳ ಮುಖಂಡರು ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.