ತುಮಕೂರು : ದಲಿತರಲ್ಲಿ ಹೋಮ-ಹವನ ಮಾಡಿಸುವುದು ಹೆಚ್ಚಾಗಿದೆ. ದೈವಭಕ್ತಿಯೂ ಜಾಸ್ತಿಯಾಗಿದೆ. ಇದರಿಂದ ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಾರೆ ಇದು ಸರಿ-ತಪ್ಪು ಎಂದು ಹೇಳುವುದಲ್ಲ, ನಮಗೆ ನಾವೇ ಅರ್ಥ ಮಾಡಿಕೊಳ್ಳಬೇಕಿದೆ ಎನ್ನುವ ಮೂಲಕ ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟೆಬಲ್ ಟ್ರಸ್ಟ್ ತುಮಕೂರು ವತಿಯಿಂದ ನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪೂಜೆ, ಹೋಮ ಮಾಡಿಸುವವರು ನಾವೇ. ಹವನ ಮಾಡಿಸುವವರು ನಾವೇ. ಕಾಣಿಕೆ ಕೊಡುವುದು ನಾವೇ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಾಸ್ತವ ಸತ್ಯವನ್ನು ಜನರಿಗೆ ಅರ್ಥ ಮಾಡಿಸಬೇಕು. ಸತ್ಯ ಹೇಳುವುದನ್ನು ಎಲ್ಲ ಯುವಕರು ಕಲಿಯಬೇಕು. ಇತಿಹಾಸ ಅರಿಯದೆ ಇತಿಹಾಸ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.
ಮುಂದುವರೆದು, ನಮಗೆ ನಾವೇ ಕೆಳವರ್ಗ ಅಂತ ಯಾಕೆ ಹೇಳಿಕೊಳ್ಳಬೇಕು. ಈ ವಿಚಾರವನ್ನು ನಾನು ಒಪ್ಪುವುದಿಲ್ಲ. ನಾವು ಕೆಳವರ್ಗ ಮತ್ತು ಮೇಲ್ವರ್ಗ ಅಂತ ಹೇಳಿಕೊಳ್ಳುವುದರ ಬದಲು ಹಿಂದುಳಿದವರು ಮತ್ತು ಮುಂದುವರೆದವರು ಅಂತ ಹೇಳಿಕೊಳ್ಳಲಿ. ಯಾರೆಲ್ಲ ಬಡವರು ಇರುತ್ತಾರೆ. ಅಸಹಾಯಕರು ಇರುತ್ತಾರೆ. ದನಿ ಇಲ್ಲದವರು ಇರುತ್ತಾರೆ. ಶೋಷಿತ ಸಮುದಾಯ ಇರುತ್ತದೆ, ಅವರು ಯಾವತ್ತೂ ಕೂಡ ಇನ್ನೊಬ್ಬರಿಗೆ ಮೋಸ ಮಾಡುವಂತಹ, ಅನ್ಯಾಯ ಮಾಡುವಂತಹ, ಸುಳ್ಳು ಹೇಳುವಂತಹ ಕೆಲಸವನ್ನು ಮಾಡುವುದಿಲ್ಲ. ನಾವು ಬೇರೆಯವರಿಗಿಂತ ಬುದ್ದಿವಂತರಿದ್ದೇವೆ. ಹಾಗಾಗಿ ನಾವ್ಯಾಕೆ ಕೆಳವರ್ಗ ಅಂತ ಹೇಳಿಕೊಳ್ಳಬೇಕು ಇದು ಸರಿಯಾದ ಚಿಂತನೆಯಲ್ಲ. ಕೆಳವರ್ಗ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಮುಂದೆ ಇಂತಹ ಪದಗಳನ್ನು ಬಳಸಬಾರದು ಎಂದು ಕಿವಿಮಾತು ಹೇಳಿದರು.
ಇನ್ನೂ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋಣ. ಬೇರೆಯವರಿಗೆ ತೊಂದರೆ ಕೊಡುವುದು ಬೇಡ. ನಮ್ಮ ಮೇಲೆ ಯಾರಾದರೂ ದಬ್ಬಾಳಿಕೆ, ದೌರ್ಜನ್ಯ ಮಾಡುವಂತಹ ಸಂದರ್ಭಗಳು ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋಣ. ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದು ಬೇಡ. ದಲಿತ ಸಂಘಟನೆಯ ಯುವಕರೇ ಬೇರೆಯವರ ಪರ ಬಂದು ಬಿಡುತ್ತಾರೆ. ಸ್ವಾರ್ಥಕ್ಕೋಸ್ಕರ ಈ ರೀತಿ ಮಾಡುವುದು ಬೇಡ. ಅಕ್ಷರ ಜ್ಞಾನದ ಆಧಾರದ ಮೇಲೆ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವಂತಹ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಸಹಕಾರ ಸಂಸ್ಥೆಗಳು ಕೆಲವರ ಹಿಡಿತದಲ್ಲಿದ್ದವು. ಪಟ್ಟಭದ್ರರು ಮಾತ್ರ ಸಾಲ ಪಡೆಯುತ್ತಿದ್ದರು. ನಾನು ಸಹಕಾರ ಸಚಿವನಾಗಿದ್ದಾಗ ಹಲವು ತಿದ್ದುಪಡಿ ಮಾಡಿ, ಎಲ್ಲ ವರ್ಗಗಳಿಗೂ ಅವಕಾಶ ಕಲ್ಪಿಸಲಾಯಿತು. ಗ್ರಾಮ ಪಂಚಾಯಿತಿ ಮಾದರಿಯಲ್ಲಿ ಸಹಕಾರ ಸಂಘ, ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಮೀಸಲಾತಿ ಜಾರಿಗೆ ಕಾಯ್ದೆ ರೂಪಿಸಲಾಗಿದೆ. ಇದು ಹೆಚ್ಚು ಅನುಷ್ಠಾನ ಆಗಬೇಕು ಎಂದು ತಿಳಿಸಿದರು.



