ಮೈಸೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಗೃಹ ಆರೋಗ್ಯ ಯೋಜನೆಯನ್ನು ನಗರ ಪ್ರದೇಶಕ್ಕೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಸದರಿ ಕಾರ್ಯಕ್ರಮದ ಕ್ರಿಯಾ ಯೋಜನೆ ಮತ್ತು ಕಾರ್ಯಕ್ರಮದ ರೂಪುರೇಷೆಯ ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಕುಮಾರಸ್ವಾಮಿ ಪಿಸಿ ರವರು ತಿಳಿಸಿದರು.
ಮೈಸೂರು ನಗರದ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ಪುನರ್ ಮನನ ತರಬೇತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸದರಿ ಕಾರ್ಯಕ್ರಮದ ಕುರಿತು ಕ್ಷೇತ್ರ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ಚಟುವಟಿಕೆಯನ್ನು ಪೂರ್ಣಗೊಳಿಸಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ನಗರ ಪ್ರದೇಶದ ಗೃಹ ಆರೋಗ್ಯ ಯೋಜನೆಯ ಆಶಾ ಕಾರ್ಯಕರ್ತೆಯರ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ನಾಗರಾಜ್ ಡಿ.ಜಿ ರವರು ಮಾತನಾಡಿ ಸದರಿ ಕಾರ್ಯಕ್ರಮದವನ್ನು ಕರ್ನಾಟಕ ಸರ್ಕಾರವು ಜಾರಿಗೊಳಿಸಿದ್ದು, ಈ ‘ಗೃಹ ಆರೋಗ್ಯ ಯೋಜನೆ’ಯಲ್ಲಿ 30 ವರ್ಷ ಮೇಲ್ಪಟ್ಟ ನಾಗರಿಕರ ಮನೆಬಾಗಿಲಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿಗಳನ್ನು ತಲುಪಿಸುವ ಪ್ರಮುಖ ಉಪಕ್ರಮವಾಗಿದೆ. ಅಕ್ಟೋಬರ್ 2024 ರಲ್ಲಿ ಪ್ರಾರಂಭವಾದ ಈ ಯೋಜನೆಯು ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಮತ್ತು ಕ್ಯಾನ್ಸರ್ (ಬಾಯಿ, ಸ್ತನ, ಗರ್ಭಕಂಠ) ಮುಂಚಿತವಾಗಿ ಪತ್ತೆಹಚ್ಚಲು ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿಯ ಮೂಲಕ ಮನೆ-ಮನೆ ಸಮೀಕ್ಷೆ ನಡೆಸುವುದು ಪ್ರಮುಖ ಕಾರ್ಯಚಟುವಟಿಕೆಯಾಗಿದೆ ಎಂದರು.
ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಸಾವು-ನೋವುಗಳನ್ನು ತಡೆಗಟ್ಟುವುದು ಮತ್ತು ಗಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಆಶಾ ಕಾರ್ಯಕರ್ತರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳ ತಂಡವು ಮನೆ-ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತದೆ ಹಾಗೂ ಔಷಧಿಗಳನ್ನು ಸರಬರಾಜು ಮಾಡುತ್ತಾರೆ. ಕಾಯಿಲೆ ಪತ್ತೆಯಾದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಿದ್ದಾರೆ ಎಂದು ತಿಳಿಸಿದರು.
ಸದರಿ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಮಹಮ್ಮದ್ ಸಿರಾಜ್ ಅಹಮ್ಮದ್, ತರಬೇತಿದಾರರಾಗಿ ಹೆಚ್.ಡಿ.ಕೋಟೆ ತಜ್ಞ ವೈದ್ಯ ಡಾ. ಪ್ರಜ್ವಲ್ , ಜಿಲ್ಲಾ ಮಟ್ಟದ ಆರೋಗ್ಯ ಮೇಲ್ವಿಚಾರಕರು ಹಾಗೂ ಆಶಾ ಕಾರ್ಯಕೆ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದರು.



