ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶುಕ್ರವಾರ ಬಿದ್ದ ಗುಡುಗು ಸಹಿತ ಭಾರಿ ಧಾರಕಾರ ಮಳೆಗೆ ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಮತ್ತು ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಮನೆ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಘಟನೆ ನಡೆದಿದೆ.
ಹಳಿಯೂರು ಗ್ರಾಮದಲ್ಲಿ ಭಾಗ್ಯ ರಮೇಶ್ ಎಂಬುವರಿಗೆ ಸೇರಿದ ಮನೆ ಕುಸಿದು ಮನೆಯಲ್ಲಿದ್ದ ದಿನಸಿ ಸಾಮಾಗ್ರಿಗಳು, ಬಟ್ಟೆ ಪಾತ್ರೆ ಸೇರಿದಂತೆ ಇನ್ನಿತರೆ ವಸ್ತುಗಳು ಸಂಪೂರ್ಣವಾಗಿ ಹಾಳಾಗಿದ್ದು ಇದರಿಂದ ಮೂರು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು ಸ್ಥಳಕ್ಕೆ ಹಳಿಯೂರು ಗ್ರಾ.ಪಂ.ಅಧ್ಯಕ್ಷೆ ರೇಖಾಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಜವರೇಗೌಡನ ಕೊಪ್ಪಲು ಗ್ರಾಮದ ಲೇ.ಜವರೇಗೌಡ ಎಂಬುವರಿಗೆ ಸೇರಿದ ಮನೆ ಮಳೆಗೆ ಸಂಪೂರ್ಣವಾಗಿ ಕುಸಿದು ಮನೆಯಲ್ಲಿ ಹದಗೊಳಿಸಿ ದಾಸ್ತಾನು ಮಾಡಿದ್ದ ತಂಬಾಕು, ಭತ್ತ, ದಿನಸಿ ಸಾಮಾಗ್ರಿಗಳು, ಪಾತ್ರೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಸುಮಾರು ಐದಾರು ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದ್ದು ಘಟನಾ ಸ್ಥಳಕ್ಕೆ ಪಿಡಿಓ ಚಿದಾನಂದ್, ವಿ.ಎ.ಮೇಘ, ಗ್ರಾ.ಪಂ.ಮಾಜಿ ಸದಸ್ಯ ವೆಂಕಟೇಶ ಮೂರ್ತಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇನ್ನು ಕುಪ್ಪೆ ಗ್ರಾ.ಪಂ.ವ್ಯಾಪ್ತಿಗೆ ಬರುವ ಚಿಕ್ಕಕೊಪ್ಪಲು ಗ್ರಾಮದಲ್ಲಿ ಮಹದೇವಮ್ಮ ರಾಜೇಗೌಡ ಎಂಬುವರಿಗೆ ಸೇರಿದ ಮನೆ ಮಳೆಗೆ ಕುಸಿದ ಪರಿಣಾಮವಾಗಿ ಮನೆಯಲ್ಲಿ ದಿನಸಿ ಸಾಮಾಗ್ರಿಗಳು, ಪಾತ್ರೆಗಳು ನಷ್ಟವಾಗಿದ್ದು ಇದರಿಂದ ಒಂದುವರೇ ಲಕ್ಷದಷ್ಟು ನಷ್ಟ ಸಂಭವಿಸಿದ್ದು ಮಹದೇವಮ್ಮ ಕಡುಬಡವರಾಗಿದ್ದು ಇವರಿಗೆ ತಾಲೂಕು ಆಡಳಿತ ಆಶ್ರಯ ಮನೆ ಮಂಜೂರು ಮತ್ತು ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಗ್ರಾ.ಪಂ.ಸದಸ್ಯೆ ರೇಖಾ ಉಮೇಶ್ ಮನವಿ ಮಾಡಿದ್ದಾರೆ.