ಬೆಳಗಾವಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿಂದಂತೆ ತಿಮ್ಮಾಪುರ ರಾಜಿನಾಮೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಭ್ರಷ್ಟಾಚಾರದ ಆರೋಪದ ಮೇಲೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ವಿರೋಧ ಪಕ್ಷದ ಬೇಡಿಕೆಗೆ ಪ್ರತಿಕ್ರಿಯಿಸಿದ ಸತೀಶ್, ಯಾವುದೇ ಆರೋಪ ಸಾಬೀತಾಗುವ ಮೊದಲೇ ರಾಜೀನಾಮೆ ಕೋರುವುದು ಎಷ್ಟು ಸಮರ್ಥನೀಯ? ಎಂದರಲ್ಲದೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಮೂವರು ಸಚಿವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿತ್ತು, ಆದರೆ ಯಾವುದೇ ರಾಜೀನಾಮೆ ನೀಡಿರಲಿಲ್ಲ ಎಂದು ಹೇಳಿದರು.
ಇನ್ನೂ ಯಾರದೋ ಆಪಾದಿತ ಆಡಿಯೋ ಅಥವಾ ವಿಡಿಯೋ ಕ್ಲಿಪ್‌ಗಳನ್ನು ಅವಲಂಬಿಸಿ ರಾಜೀನಾಮೆಗೆ ಬೇಡಿಕೆ ಇಡುವುದು ತರ್ಕ ಬದ್ಧವಲ್ಲದ ಮತ್ತು ರಾಜಕೀಯ ಪ್ರೇರಿತ ಎಂದು ಕರೆದರು.
ಪ್ರತಿಯೊಂದು ಇಲಾಖೆಯ ಬಗ್ಗೆಯೂ ಇಂತಹ ಚರ್ಚೆಗಳು ನಡೆಯುತ್ತವೆ. ಅದು ಸಾಬೀತಾಗದಿದ್ದರೇ ಮಂತ್ರಿಗಳನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದು ಈ ಸಂದರ್ಭದಲ್ಲಿ ತಿಮ್ಮಾಪುರ ಅವರನ್ನು ಬಲವಾಗಿ ಸಮರ್ಥಿಸಿಕೊಂಡರು.
ನಾಯಕತ್ವ ಬದಲಾವಣೆ ಚರ್ಚೆಯಲ್ಲಿ, ಸತೀಶ್ ಅವರು ಆಡಳಿತ ಪಕ್ಷದೊಳಗಿನ ಗೊಂದಲವನ್ನು ಸ್ಪಷ್ಟವಾಗಿ ಒಪ್ಪಿಕೊಂಡರು. ಇನ್ನೂ ಅನಿಶ್ಚಿತತೆಯು ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಿಂದ ಶಾಸಕರವರೆಗೆ ವ್ಯಾಪಕವಾಗಿದೆ ಎಂದರು.
ಈ ವೇಳೆ ಪಕ್ಷ ಮತ್ತು ಸರ್ಕಾರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದಂತೆ ತಡೆಯಲು ಕಾಂಗ್ರೆಸ್ ಹೈಕಮಾಂಡ್ ಆದಷ್ಟು ಬೇಗ ಮಧ್ಯಪ್ರವೇಶಿಸಿ ಸ್ಪಷ್ಟ ನಿರ್ಧಾರವನ್ನು ಘೋಷಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಒಳಗಿನ ಪ್ರಭಾವಿ ನಾಯಕರು ತಮ್ಮದೇ ಸರ್ಕಾರದ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಸತೀಶ್ ನಿರಾಕರಿಸಿದರು.



