ಭಾರತದಲ್ಲಿ ಬೆಂಡೆಕಾಯಿ ಪಲ್ಯ ಇಷ್ಟಪಡದವರು ಯಾರೂ ಇರಲಾರರು. ಹೆಚ್ಚಿನವರ ಊಟದ ತಟ್ಟೆಯಲ್ಲಿ ಇದೊಂದು ನೆಚ್ಚಿನ ತರಕಾರಿ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳ ಗುಣಮಟ್ಟ ಮತ್ತು ರಾಸಾಯನಿಕಗಳ ಬಳಕೆಯಿಂದಾಗಿ ಜನರ ನಂಬಿಕೆ ಕಡಿಮೆಯಾಗುತ್ತಿದೆ. ಹೀಗಿರುವಾಗ, ತಾಜಾ ಮತ್ತು ಸುರಕ್ಷಿತವಾದ ಬೆಂಡೆಕಾಯಿಯನ್ನು ನಿಮ್ಮ ಮನೆಯ ಬಾಲ್ಕನಿ, ಟೆರೇಸ್ ಅಥವಾ ಪುಟ್ಟ ಗಾರ್ಡನ್ನಲ್ಲಿ ಬೆಳೆಸಿಕೊಂಡರೆ ಎಷ್ಟು ಚೆನ್ನ ಅಲ್ವೇ? ಮನೆಯಲ್ಲೇ ಬೆಂಡೆಕಾಯಿ ಬೆಳೆಸುವುದು ಸುಲಭ ಮಾತ್ರವಲ್ಲ, ಕಡಿಮೆ ಸಮಯದಲ್ಲಿ ಉತ್ತಮ ಫಸಲನ್ನೂ ನೀಡುತ್ತದೆ. ಸರಿಯಾದ ಸಮಯ, ಮಣ್ಣಿನ ಜೊತೆ ಸ್ವಲ್ಪ ಕಾಳಜಿ ವಹಿಸಿದರೆ ಕೇವಲ 40 ದಿನಗಳಲ್ಲಿ ನೀವು ತಾಜಾ ಬೆಂಡೆಕಾಯಿಯನ್ನು ಕೊಯ್ಲು ಮಾಡಬಹುದು.
ಬೆಂಡೆಕಾಯಿ ಬೆಳೆಸುವ ಸರಳ ವಿಧಾನ ಇಲ್ಲಿದೆ:
ಸರಿಯಾದ ಸಮಯ ಮತ್ತು ಹವಾಮಾನದ ಆಯ್ಕೆ
ಬೆಂಡೆಕಾಯಿ ಬೆಚ್ಚನೆಯ ಹವಾಮಾನದಲ್ಲಿ ಬೆಳೆಯುವ ಬೆಳೆಯಾಗಿದೆ. ಆದ್ದರಿಂದ ಇದನ್ನು ಬಿತ್ತಲು ಸರಿಯಾದ ಸಮಯವನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಫೆಬ್ರವರಿಯಿಂದ ಮಾರ್ಚ್ ಅಥವಾ ಮಳೆಗಾಲದ ಜುಲೈನಿಂದ ಆಗಸ್ಟ್ ಅವಧಿಯಲ್ಲಿ ಬೀಜ ಬಿತ್ತನೆ ಮಾಡುವುದು ಸೂಕ್ತ. ಚಳಿಗಾಲದಲ್ಲಿ ಬೀಜಗಳು ಸರಿಯಾಗಿ ಮೊಳಕೆಯೊಡೆಯುವುದಿಲ್ಲ, ಆದ್ದರಿಂದ ತಾಪಮಾನದ ಬಗ್ಗೆ ಗಮನವಿರಲಿ. ಹವಾಮಾನ ಪೂರಕವಾಗಿದ್ದರೆ ಗಿಡಗಳು ವೇಗವಾಗಿ ಬೆಳೆದು ಬೇಗನೆ ಫಲ ನೀಡುತ್ತವೆ.
ಕುಂಡ ಮತ್ತು ಮಣ್ಣಿನ ಸಿದ್ಧತೆ
ಕುಂಡದ ಆಯ್ಕೆ: ಬೆಂಡೆಕಾಯಿ ಬೆಳೆಯಲು ಕನಿಷ್ಠ 12 ಇಂಚು ಆಳದ ಕುಂಡ ಅಥವಾ ಗ್ರೋ ಬ್ಯಾಗ್ (Grow Bag) ಬಳಸುವುದು ಉತ್ತಮ. ಕುಂಡದ ತಳದಲ್ಲಿ ನೀರು ಹೊರಹೋಗಲು ರಂಧ್ರಗಳಿವೆಯೇ ಎಂದು ಖಚಿತಪಡಿಸಿಕೊಳ್ಳಿ.
ಮಣ್ಣಿನ ಮಿಶ್ರಣ: ಮಣ್ಣು ಹಗುರವಾಗಿದ್ದರೆ ಬೇರುಗಳು ಸುಲಭವಾಗಿ ಹರಡಿಕೊಳ್ಳುತ್ತವೆ. ಗಾರ್ಡನ್ ಮಣ್ಣಿನ ಜೊತೆಗೆ ಕೊಟ್ಟಿಗೆ ಗೊಬ್ಬರ ಅಥವಾ ವರ್ಮಿಕಾಂಪೋಸ್ಟ್ (ಎರೆಹುಳು ಗೊಬ್ಬರ) ಮತ್ತು ಸ್ವಲ್ಪ ಮರಳು ಅಥವಾ ಕೋಕೋಪೀಟ್ ಸೇರಿಸುವುದು ಲಾಭದಾಯಕ. ಉತ್ತಮ ಮಣ್ಣಿನ ಮಿಶ್ರಣವು ಗಿಡದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.
ಬೀಜ ಬಿತ್ತುವಿಕೆ ಮತ್ತು ಗಿಡದ ಆರೈಕೆ
ಬಿತ್ತನೆ: ಬೆಂಡೆಕಾಯಿ ಬೀಜಗಳನ್ನು ನೇರವಾಗಿ ಕುಂಡದಲ್ಲಿ ನೆಡಬಹುದು. ಬೀಜವನ್ನು ಸುಮಾರು 1 ರಿಂದ 1.5 ಇಂಚು ಆಳದಲ್ಲಿ ಬಿತ್ತಬೇಕು. ಪ್ರತಿ ಬೀಜದ ನಡುವೆ 6 ರಿಂದ 8 ಇಂಚು ಅಂತರವಿರಲಿ, ಇದರಿಂದ ಗಿಡಕ್ಕೆ ಗಾಳಿ ಮತ್ತು ಬೆಳಕು ಸರಿಯಾಗಿ ಸಿಗುತ್ತದೆ.
ನೀರು: ಬೀಜ ಬಿತ್ತಿದ ನಂತರ ಮಣ್ಣು ಹದವಾಗುವಂತೆ ಸ್ವಲ್ಪ ನೀರು ಚಿಮುಕಿಸಿ. ಬೆಂಡೆ ಗಿಡಕ್ಕೆ ಮಣ್ಣಿನಲ್ಲಿ ಲಘು ತೇವಾಂಶವಿದ್ದರೆ ಸಾಕು. ಅತಿಯಾಗಿ ನೀರುಣಿಸಿದರೆ ಬೇರು ಕೊಳೆಯಬಹುದು ಮತ್ತು ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಹುದು.
ಬಿಸಿಲು: ಬೆಂಡೆ ಗಿಡಕ್ಕೆ ದಿನಕ್ಕೆ ಕನಿಷ್ಠ 5 ರಿಂದ 8 ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕಾಗುತ್ತದೆ. ಆದ್ದರಿಂದ ಬಿಸಿಲು ಚೆನ್ನಾಗಿ ಬೀಳುವ ಜಾಗದಲ್ಲಿ ಕುಂಡವನ್ನು ಇರಿಸಿ.
ರಕ್ಷಣೆ: ಕೀಟಗಳ ಕಾಟದಿಂದ ತಪ್ಪಿಸಲು ‘ಬೇವಿನ ಎಣ್ಣೆ’ಯನ್ನು (Neem Oil) ಬಳಸಬಹುದು.
ಸರಿಯಾದ ಆರೈಕೆ, ತೇವಾಂಶ ಮತ್ತು ತಾಪಮಾನ ಸಿಕ್ಕರೆ 5 ರಿಂದ 8 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ. ಅಂದಾಜು 40 ದಿನಗಳಲ್ಲಿ ನಿಮ್ಮ ಗಿಡ ಕೊಯ್ಲಿಗೆ ಸಿದ್ಧವಾಗುತ್ತದೆ!



